ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಅಪರಾಧಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ

Update: 2018-10-11 16:38 GMT

ಮಂಗಳೂರು, ಅ.11: ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧ ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮತ್ತು ವಿಶೇಷ ನ್ಯಾಯಾಲಯ (ಪೋಕ್ಸೊ)ದಲ್ಲಿ ಸಾಬೀತಾಗಿದ್ದು, ಅಪರಾಧಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ.ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಮಂಗಳೂರು ತಾಲೂಕು ಕೊಕುಡೆ ಗ್ರಾಮದ ಹರಿಪಾದೆ ನಿವಾಸಿ ರಮೇಶ್ (34) ಶಿಕ್ಷೆಗೊಳಗಾದ ಅಪರಾಧಿ. ದಂಡ ಪಾವತಿಸಲು ವಿಫಲವಾದರೆ ಮತ್ತೆ 1 ವರ್ಷ ಸಾದಾ ಸಜೆ ಅನುಭವಿಸಬೇಕು. ದಂಡದ ಮೊತ್ತದಲ್ಲಿ 20 ಸಾವಿರ ರೂ. ನೊಂದ ಬಾಲಕಿಗೆ ನೀಡಬೇಕು. ಸಂತ್ರಸ್ತೆ ಕಾನೂನು ಸೇವಾ ಪ್ರಾಧಿಕಾರದಿಂದಲೂ ಪರಿಹಾರ ಪಡೆಯಬಹುದು ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಅಪರಾಧಿ ರಮೇಶನಿಗೂ ನೊಂದ ಬಾಲಕಿಯ ತಾಯಿಗೂ ಸ್ನೇಹವಿತ್ತು. ರಮೇಶ ಆಗಾಗ ಮಹಿಳೆಯ ಮನೆಗೆ ಬರುತ್ತಿದ್ದ. ತಾಯಿ, ಮಗಳು 2013ರಿಂದ 2016ರ ತನಕ ಪಾವಂಜೆ, ಕಿನ್ನಿಗೋಳಿ, ಬೆಳ್ಳಾಯೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈ ಸಂದರ್ಭ ರಮೇಶ್ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಲಾಗಿತ್ತು.

ಶಿಕ್ಷಕಿಯಿಂದ ಪ್ರಕರಣ ಬಯಲು: ಇಡ್ಯಾ ಗ್ರಾಮದ ಅನುದಾನಿತ ಧೂಮಾವತಿ ಹಿ.ಪ್ರಾ.ಶಾಲೆಯಲ್ಲಿ ಲೈಂಗಿಕ ದೌರ್ಜನ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಲ್ಲಿನ ವಿದ್ಯಾರ್ಥಿನಿಯಾಗಿದ್ದ ಬಾಲಕಿ ತನಗಾದ ದೌರ್ಜನ್ಯವನ್ನು ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಳು. ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಕಿ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಸಂಗ್ರಹಿಸಿದ್ದರು.

ಆ ಬಳಿಕ ವಿದ್ಯಾರ್ಥಿನಿಯನ್ನು ಮುಲ್ಕಿ ಠಾಣೆಗೆ ಕರೆದೊಯ್ದು ಆಕೆಯ ಮೂಲಕ ಪ್ರಕರಣ ದಾಖಲಿಸಿದ್ದರು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಮುಲ್ಕಿ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು,

ಪ್ರತಿಕೂಲ ಸಾಕ್ಷಿ: ನ್ಯಾಯಾಧೀಶರಾದ ಬಿ.ಆರ್.ಪಲ್ಲವಿ ಒಟ್ಟು 15 ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ನೊಂದ ಬಾಲಕಿಯ ತಾಯಿ ಹಾಗೂ ಆಕೆಯ ಅಣ್ಣ ಆರೋಪಿಗೆ ಪೂರಕವಾಗಿ ಪ್ರತಿಕೂಲ ಸಾಕ್ಷಿ ಹೇಳಿದ್ದರು. ಆದರೂ ಶಿಕ್ಷಕಿ, ವೈದ್ಯರ ವರದಿ ಹಾಗೂ ಪೊಲೀಸ್ ತನಿಖೆ ಆಧಾರದಲ್ಲಿ ಆರೋಪ ಸಾಬೀತಾಗಿ ಅಪರಾಧಿಗೆ ಶಿಕ್ಷೆಯಾಗಿದೆ.

ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ಸರಕಾರದ ಪರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News