ಬಂಟ್ವಾಳ: ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ 130 ವಿದ್ಯಾರ್ಥಿಗಳಿಗೆ ಉಚಿತ ಕ್ರೀಡಾಸಮವಸ್ತ್ರ ವಿತರಣೆ

Update: 2018-10-11 17:31 GMT

ಬಂಟ್ವಾಳ, ಅ. 11: ತಾಲೂಕಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದಲ್ಲಿ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ 130 ಶಾಲಾ ಕ್ರೀಡಾಪಟುಗಳಿಗೆ ಬಂಟ್ವಾಳ ತಾಪಂಚಾಯತ್ ಉಚಿತವಾಗಿ ನೀಡುವ ಕ್ರೀಡಾ ಸಮವಸ್ತ್ರ ವಿತರಣಾ ಕಾರ್ಯಕ್ರಮ ತಾಪಂನ ಎಸ್‍ಜಿಆರ್ ಎಸ್‍ವೈ ಸಭಾಂಗಣದಲ್ಲಿ ಗುರುವಾರ ನಡೆಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸಮವಸ್ತ್ರ ವಿತರಿಸಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿ, ಪಾಠದ ಜೊತೆ ಕ್ರೀಡೆಗೂ ಸಮಾನವಾದ ಪ್ರಾಶಸ್ತ್ಯ ನೀಡಿದಾಗ ಕ್ರೀಡೆಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು. ಮೌಲ್ಯಾಧಾರಿತ ಜೀವನದಲ್ಲಿ ಕ್ರೀಡೆಯೂ ಒಂದು ಭಾಗವಾಗಲಿ. ಸರಿಯಾದ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಿದಾಗ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ ಎಂದು ನುಡಿದರು.

ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ ಮಾತನಾಡಿ, ಕ್ರೀಡೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ತಾಪಂ ವಿಶೇಷ ಮುತುವರ್ಜಿಯಿಂದ ಸಮವಸ್ತ್ರ ನೀಡುವ ಮೂಲಕ ಉತ್ತೇಜನ ನೀಡುತ್ತಿದೆ. ಕ್ರೀಡೆಯಲ್ಲಿ ಭಾಗವಹಿಸುವ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಿ, ಸೋಲು ಗೆಲುವಿನ ಚಿಂತೆ, ಕೀಳರಿಮೆ ಬೇಡ ಎಂದರು.

ವೇದಿಕೆಯಲ್ಲಿ ಸ್ಥಾಯಿ ಸಮಿತಿ ಅದ್ಯಕ್ಷೆ ಧನಲಕ್ಮೀ ಸಿ. ಬಂಗೇರ, ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಚಿನ್ನಪ್ಪ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News