'ಸಮಾಜದಲ್ಲಿ ಬದಲಾವಣೆ ಬಯಸುವುದಾದರೆ ರಾಜಕೀಯಕ್ಕೆ ಬನ್ನಿ'

Update: 2018-10-12 13:46 GMT

ಉಡುಪಿ, ಅ.12: ಸಮಾಜದಲ್ಲಿ ಬದಲಾವಣೆ ಬಯಸುವುದಾದರೆ ಮಾತ್ರ ರಾಜಕೀಯ ಬರಬೇಕು. ಈಗ ಇರುವ ವ್ಯವಸ್ಥೆಗೆ ಹೊಂದಿಕೊಳ್ಳುವುದಾದರೆ ರಾಜಕೀಯಕ್ಕೆ ಬರುವುದು ಬೇಡ ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ಹಾಗೂ ರಾಜಶಾಸ್ತ್ರ ವಿಭಾಗದ ವತಿಯಿಂದ ಶುಕ್ರವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ರಾಜಕಾರಣಿ ಅಂದರೆ ನಿಕೃಷ್ಟವಾಗಿ ನೋಡುವ ಸ್ಥಿತಿ ಇಂದು ಸಮಾಜದಲ್ಲಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ಮತ ದಾರನಿಗೆ ಇದೆ. ಅದಕ್ಕೆ ಉತ್ತರಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿದೆ. ಕ್ಷೇತ್ರದ ಕೆಲಸದ ಬಗ್ಗೆ ಜನಪ್ರತಿನಿಧಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಂಡರೆ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಸಾಧ್ಯ ಎಂದರು.

ಚುನಾವಣೆಗೆ ಸ್ಪರ್ಧಿಸುವಾಗ ಪ್ರತಿಯೊಬ್ಬರು ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕು. ಆದರೆ ಐದು ವರ್ಷಗಳ ನಂತರ ಅವರ ಆಸ್ತಿ ದುಪ್ಪಟ್ಟು ಜಾಸ್ತಿಯಾದರೆ ಅದರ ಬಗ್ಗೆ ತನಿಖೆ ಮಾಡುವ ಯಾವುದೇ ಅಧಿಕಾರ ಲೋಕಾಯುಕ್ತಕ್ಕೆ ಇಲ್ಲ. ಹಾಗಾದರೆ ಈ ವ್ಯವಸ್ಥೆ ಇದ್ದು ಏನು ಪ್ರಯೋಜನ ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಮೂರು ನಾಲ್ಕು ರಾಜಕೀಯ ಪಕ್ಷಗಳು ಮಾತ್ರ ಇದ್ದರೆ ಉತ್ತಮ. ಇದರಿಂದ ಚುನಾವಣಾ ವೆಚ್ಚ ಕೂಡ ಕಡಿಮೆ ಆಗುತ್ತದೆ. ಅಲ್ಲದೆ ಪಕ್ಷದೊಳಗೆ ಪೂರ್ವಭಾವಿಯಾಗಿ ಅಭ್ಯರ್ಥಿಗಳ ಆಯ್ಕೆ ಮಾಡಿ, ನಂತರ ಜನರ ಆಯ್ಕೆಗೆ ಅವಕಾಶ ಕಲ್ಪಿಸಬೇಕು ಎಂದು ಅವರು ಅಭಿಪ್ರಾಯ ಪಟ್ಟರು. ಇಂದು ಜನರಿಗೆ ಹಣವೇ ಮುಖ್ಯವಾಗಿದೆ. ಒಳ್ಳೆಯ ಮತದಾರರು ಇರು ವಲ್ಲಿ ಒಳ್ಳೆಯ ಜನಪ್ರತಿನಿಧಿ ಆಯ್ಕೆಯಾಗುತ್ತಾರೆ. ಎಲ್ಲವೂ ಜನರ ಮೇಲೆ ಅವಲಂಬಿತವಾಗಿರುತ್ತದೆ. ಮತ ಹಾಕುವಾಗ ರಾಜಕೀಯ ಪಕ್ಷದ ಜೊತೆ ಅಭ್ಯರ್ಥಿಯನ್ನು ಕೂಡ ನೋಡಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷರ ಆಯ್ಕೆಯಲ್ಲಿ ಮೀಸಲಾತಿ ಕುರಿತ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕಾನೂನು ಸರಿಯಾಗಿಯೇ ಇದೆ. ಆದರೆ ಆ ಮೀಸಲಾತಿಯನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾ ಯಿಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

ಚುನಾಯಿತ ಪ್ರತಿನಿಧಿ ಸಾಮಾಜಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕೆ ಹೊರತು ವೈಯಕ್ತಿಕ ಹಿತಾಸಕ್ತಿಗಳಲ್ಲ. ಶಾಸನ ರಚನೆ ಮಾಡುವ ಅಧಿವೇಶನದಲ್ಲಿ ಭಾಗವಹಿಸುವವನೆ ನಿಜವಾದ ಶಾಸಕ, ಇಲ್ಲದಿದ್ದರೆ ಆತ ಕೇವಲ ಸದಸ್ಯನಾಗಿ ಇರುತ್ತಾನೆ. ಮೊದಲು ಉದ್ಯಮಿಗಳು ತಮ್ಮ ಕೆಲಸಕ್ಕಾಗಿ ಜನಪ್ರತಿನಿಧಿಗಳ ಬಳಿ ಬರುತ್ತಿದ್ದರು. ಆದರೆ ಇಂದು ಜನಪ್ರತಿನಿಧಿಗಳೇ ಉದ್ಯಮಿಗಳಾಗಿದ್ದಾರೆ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ ವಹಿಸಿ ದ್ದರು. ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಮಂಜುನಾಥ ಕಾಮತ್ ಉಪಸ್ಥಿತರಿದ್ದರು.

ಸಂವಾದದಲ್ಲಿ ವಿದ್ಯಾರ್ಥಿಗಳಾದ ಧನುಷ್, ಕೌಶಿಕ್, ಗೌತಮ್, ನವೀನ್ ಎಲ್., ಅರುಣ್ ಡಿ., ಸಂಜಯ್ ಕುಮಾರ್, ಆಕಾಂಕ್ಷ, ವಿಭಾ ಭಾಗವಹಿಸಿ ದ್ದರು. ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ನೇಹಾ ಕಾರ್ಯಕ್ರಮ ನಿರೂಪಿಸಿದರು.

‘ಚಿಂತನೆ ಬದಲಾಯಿಸಿದರೆ ಆತ್ಮವಂಚನೆ ಮಾಡಿದಂತೆ’
ತಾನು ಒಪ್ಪದ ಸಿದ್ಧಾಂತ ಹೊಂದಿರುವ ಪಕ್ಷಕ್ಕೆ ಸೇರ್ಪಡೆಗೊಳ್ಳುವ ರಾಜ ಕಾರಣಿಯಿಂದ ಅವರ ಬೆಂಬಲಿಗರು ಹಾಗೂ ಮತದಾರರು ಗೊಂದಲಕ್ಕೆ ಒಳಗಾಗುವುದಿಲ್ಲವೇ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಜಯಪ್ರಕಾಶ್ ಹೆಗ್ಡೆ ತನ್ನದೇ ಉದಾಹರಣೆಯಾಗಿ ನೀಡಿ ಮಾತನಾಡಿದರು.
‘ಇದರಿಂದ ಬೆಂಬಲಿಗರಿಗೆ ಯಾವುದೇ ತೊಂದರೆ ಆಗಲ್ಲ. ಮತ ಹಾಕುವ ಮೊದಲು ಮತದಾರರು ಆ ರಾಜಕಾರಣಿಯ ಬಗ್ಗೆ ಆಲೋಚನೆ ಮಾಡಬೇಕು. ಪಕ್ಷ ಬದಲಾಯಿಸಿದರೂ ನಮ್ಮ ಚಿಂತನೆ, ನಿಲುವನ್ನು ಶೇ.100ರಷ್ಟು ಬದಲಾಯಿಸಿದರೆ ನಮಗೆ ನಾವೇ ಮೋಸ ಮಾಡಿದಂತಾಗುತ್ತದೆ’ ಎಂದು ಹೆಗ್ಡೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News