ಝಾಕಿರ್ ನಾಯ್ಕ್ ಅವರಿಗೆ ಸೇರಿದ ನಾಲ್ಕು ಆಸ್ತಿ ಮುಟ್ಟುಗೋಲಿಗೆ ಎನ್‌ಐಎ ನ್ಯಾಯಾಲಯ ಆದೇಶ

Update: 2018-10-12 14:43 GMT

ಮುಂಬೈ, ಅ. 12: ವಿದೇಶದಲ್ಲಿರುವ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ಅವರಿಗೆ ಸೇರಿದ ಮುಂಬೈಯಲ್ಲಿರುವ ನಾಲ್ಕು ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಇಲ್ಲಿನ ವಿಶೇಷ ಎನ್‌ಐಎ ನ್ಯಾಯಾಲಯ ಆದೇಶಿಸಿದೆ.

ಇಲ್ಲಿನ ನ್ಯಾಯಾಲಯ 2017 ಜೂನ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ಡೆ ಅಡಿ ಝಾಕಿರ್ ನಾಯ್ಕ್ ಅವರನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ ಎನ್‌ಐಎ ಝಾಕಿರ್ ನಾಯ್ಕ್ ಅವರಿಗೆ ಸೇರಿದ ನಗರದಲ್ಲಿರುವ ವಾಣಿಜ್ಯ ಸಂಕೀರ್ಣ ಹಾಗೂ ಎರಡು ಫ್ಲಾಟ್‌ಗಳನ್ನು ವಶಪಡಿಸಿಕೊಂಡಿದೆ. ಝಾಕಿರ್ ನಾಯ್ಕ್ ಅವರಿಗೆ ಸೇರಿದ ಮಝ್ಗಾಂವ್ ಪ್ರದೇಶದಲ್ಲಿರುವ ನಾಲ್ಕು ಸೊತ್ತುಗಳನ್ನು ವಶಪಡಿಸಿಕೊಳ್ಳಲು ಅನುಮತಿ ನೀಡುವಂತೆ ಕೋರಿ ತನಿಖಾ ಸಂಸ್ಥೆ ಗುರುವಾರ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಕೇಂದ್ರ ತನಿಖಾ ಸಂಸ್ಥೆ ಪ್ರಕರಣ ದಾಖಲಿಸಿದ ಬಳಿಕ ಝಾಕಿರ್ ನಾಯ್ಕ್ ಅವರ ವಿವಿಧ ಹಣಕಾಸಿನ ಮೂಲ ಸ್ಥಗಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರು ವಿದೇಶದಲ್ಲಿದ್ದುಕೊಂಡೇ ಈ ಆಸ್ತಿ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಎನ್‌ಐಎ ಪ್ರತಿಪಾದಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಮನವಿ ಸ್ವೀಕರಿಸಿದೆ.

ಝಾಕಿರ್ ನಾಯ್ಕ್ ವಿವಿಧ ದೇಶಗಳ ಪೌರತ್ವ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮಝ್ಗಾಂವ್‌ನಲ್ಲಿರುವ ಸೊತ್ತನ್ನು ಮಾರುವ ಮೂಲಕ ತನ್ನ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಎನ್‌ಐಎ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ವಕೀಲ ಆನಂದ್ ಸುಖ್‌ದೇವ್ ಪ್ರತಿಪಾದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News