ಬೈಂದೂರು ಯುವತಿಯ ಅತ್ಯಾಚಾರ ಪ್ರಕರಣ: ಆರೋಪಿಗೆ 10 ವರ್ಷ ಕಠಿಣ ಜೈಲುಶಿಕ್ಷೆ

Update: 2018-10-12 15:14 GMT

ಕುಂದಾಪುರ, ಅ.12: ಎಂಟು ವರ್ಷಗಳ ಹಿಂದೆ ನಡೆದ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮಂಜುನಾಥ ನಾಯ್ಕಾ (33) ಎಂಬಾತನಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

2010ರ ಮಾ.10ರಂದು ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರುವ ಮನೆಗೆ ನುಗ್ಗಿದ ಮಂಜುನಾಥ್, 20ರ ಹರೆಯದ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರ ಎಸಗಿದ್ದನು. ಇದರಿಂದ ಆಕೆ 2010ರ ಸೆ.29ರಂದು ಗರ್ಭಿಣಿಯಾಗಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಯುವತಿ ಮದುವೆಯಾಗುವಂತೆ ಮಂಜುನಾಥ ಬಳಿ ಕೇಳಿದಾಗ ಆತ 2 ಲಕ್ಷ ರೂ. ವರದಕ್ಷಿಣೆ ಕೇಳಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿ ರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿ.23ರಂದು ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದರು.

ಆಗಿನ ಬೈಂದೂರು ವೃತ್ತ ನಿರೀಕ್ಷಕ ಕಾಂತರಾಜು ಕೆ. ತನಿಖೆ ನಡೆಸಿ, ನ್ಯಾಯಾ ಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಒಟ್ಟು 9 ಸಾಕ್ಷಿಗಳ ಪೈಕಿ 8 ಸಾಕ್ಷಿಗಳ ವಿಚಾರಣೆ ನಡೆಸಿದ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಆರೋಪಿಯನ್ನು ದೋಷಿಯೆಂದು ಅ.6ರಂದು ಘೋಷಿಸಿ, ಶಿಕ್ಷೆ ಪ್ರಮಾಣವನ್ನು ಅ.12ರಂದು ಪ್ರಕಟಿಸುವುದಾಗಿ ಆದೇಶದಲ್ಲಿ ತಿಳಿಸಿದ್ದರು.

ಅದರಂತೆ ನ್ಯಾಯಾಧೀಶ ಪ್ರಕಾಶ್ ಖಂಡೇರಿ ಇಂದು ಆರೋಪಿಗೆ ಅತ್ಯಾ ಚಾರಕ್ಕೆ 10 ವರ್ಷ ಕಠಿಣ ಸಜೆ ಹಾಗೂ 40 ಸಾವಿರ ರೂ. ದಂಡ, ಅವಾಚ್ಯ ಶಬ್ದಗಳಿಂದ ನಿಂದನೆಗೆ ಒಂದು ವರ್ಷ ಶಿಕ್ಷೆ, ಜೀವ ಬೆದರಿಕೆಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ, ಮದುವೆಯಾಗುವುದಾಗಿ ವಂಚಿಸಿದ್ದಕ್ಕೆ ಒಂದು ವರ್ಷ ಕಠಿಣ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು.

ಆರೋಪಿ ಎಲ್ಲವನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿರುವುದರಿಂದ ವಿವಿಧ ಪ್ರಕರಣಗಳಲ್ಲಿ ಒಟ್ಟು 80 ಸಾವಿರ ರೂ. ದಂಡ ಹಾಗೂ 10 ವರ್ಷ ಜೈಲುವಾಸ ವಿಧಿಸಲಾಗಿದೆ. ಸಂತ್ರಸ್ತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬಹುದೆಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿ ಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News