ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

Update: 2018-10-12 15:24 GMT

ಮಂಗಳೂರು, ಅ.12: ಕ್ಷುಲ್ಲಕ ವಿಚಾರಕ್ಕೆ ಯುವಕನೋರ್ವನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿ ಶುಕ್ರವಾರ ಶಿಕ್ಷೆ ಪ್ರಕಟಿಸಿದೆ.

ಶಿಕಾರಿಪುರದ ಪ್ರದೀಪ್‌ಕುಮಾರ್ (32) ಶಿಕ್ಷಗೊಳಗಾದ ಅಪರಾಧಿ. ಬಳ್ಳಾರಿಯ ರುದ್ರಸ್ವಾಮಿ ಯಾನೆ ಸಂತು(26) ಕೊಲೆಯಾದ ಯುವಕ.

ಪ್ರಕರಣ ವಿವರ: ಪ್ರದೀಪ್‌ಕುಮಾರ್ ಮತ್ತು ರುದ್ರಸ್ವಾಮಿ ನಗರದ ಕುತ್ತಾರಿನ ಸಂಗೀತ ಕಾಂಪ್ಲೆಕ್ಸ್ ನಲ್ಲಿರುವ ಮಮತಾ ಮೆನ್ಸ್ ಬ್ಯೂಟಿಪಾರ್ಲರ್‌ನಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದು, ಅದೇ ಕಾಂಪ್ಲೆಕ್ಸ್‌ನ ಮೇಲಿನ ಮಹಡಿಯಲ್ಲಿ ಜೊತೆಯಾಗಿ ವಾಸ ಮಾಡುತ್ತಿದ್ದರು. 2016ರ ಡಿ.31ರಂದು ಹುಡುಗಿಯೋರ್ವಳಲ್ಲಿ ಮಾತನಾಡುವ ಕ್ಷುಲ್ಲಕ ವಿಚಾರಕ್ಕೆ ಪ್ರದೀಪ್ ಕುಮಾರ್ ತನ್ನ ಜೊತೆಯಲ್ಲಿರುವ ರುದ್ರಸ್ವಾಮಿ ಯಾನೆ ಸಂತುವಿನ ಎದೆಗೆ ಚೂರಿಯಿಂದ ಇರಿಯುತ್ತಾನೆ. ಗಾಯಗೊಂಡು ಅಲ್ಲಿಯೇ ಕುಸಿದು ಬಿದ್ದಿರುವ ರುದ್ರಸ್ವಾಮಿಯನ್ನು ಬ್ಯೂಟಿಪಾರ್ಲರ್ ನ ಮಾಲಕ ರಮೇಶ್ ಎಂಬವರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದನು.

ಈ ಬಗ್ಗೆ ಬ್ಯೂಟಿಪಾರ್ಲರ್ ಮಾಲಕ ರಮೇಶ್ ಉಳ್ಳಾಲ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು 2017ರ ಜ.2ರಂದು ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಪ್ರದೀಪ್‌ಕುಮಾರ್‌ನನ್ನು ಉಜ್ಜೋಡಿ ಎಂಬಲ್ಲಿ ಬಂಧಿಸಿದ್ದರು. ಈ ಕೊಲೆ ಪ್ರಕರಣದ ತನಿಖೆ ಕೈಗೊಂಡ ಉಳ್ಳಾಲ ಪೊಲೀಸ್ ಇನ್‌ಸ್ಪೆಪೆಕ್ಟರ್ ಗೋಪಿಕೃಷ್ಣ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ 302ರಡಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣವು ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿ ಕೃತ್ಯವೆಸಗಿರುವುದು ರುಜುವಾತಾಗಿದೆ. ಈ ಹಿನ್ನೆಲೆ ನ್ಯಾಯಾಧೀಶ ಮುರಳೀಧರ ಪೈ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 1,000 ರೂ. ದಂಡ ವಿಧಿಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಸರಕಾರಿ ಅಭಿಯೋಜಕ ನಾರಾಯಣ ಸೇರಿಗಾರ್ ಯು. ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News