ಐಎಸ್‌ಐ ಟೀಕಿಸಿದ ಇಸ್ಲಾಮಾಬಾದ್ ಹೈಕೋರ್ಟ್ ನ್ಯಾಯಾಧೀಶರ ವಜಾ

Update: 2018-10-12 16:39 GMT

ಇಸ್ಲಾಮಾಬಾದ್, ಅ. 12: ಪಾಕಿಸ್ತಾನದ ಸೇನಾ ಗುಪ್ತಚರ ಸಂಸ್ಥೆ ಐಎಸ್‌ಐಯನ್ನು ಟೀಕಿಸಿ ಭಾಷಣ ಮಾಡಿರುವ ಇಸ್ಲಾಮಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರನ್ನು ದೇಶದ ಅಧ್ಯಕ್ಷ ಆರಿಫ್ ಅಲ್ವಿ ಗುರುವಾರ ವಜಾಗೊಳಿಸಿದ್ದಾರೆ.

ಐಎಸ್‌ಐ ವಿರುದ್ಧ ಭಾಷಣ ಮಾಡಿರುವುದಕ್ಕೆ ಸಂಬಂಧಿಸಿ ಇಸ್ಲಾಮಾಬಾದ್ ಹೈಕೋರ್ಟ್‌ನ ನ್ಯಾಯಾಧೀಶ ಶೌಕತ್ ಅಝೀಝ್ ಸಿದ್ದೀಖಿ ದುರ್ನಡತೆ ಪ್ರಕರಣವನ್ನು ಎದುರಿಸುತ್ತಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಉನ್ನತ ಸಾಂವಿಧಾನಿಕ ಸಂಸ್ಥೆ ‘ಸುಪ್ರೀಂ ಜುಡಿಶಿಯಲ್ ಕೌನ್ಸಿಲ್’ ನ್ಯಾಯಾಧೀಶರನ್ನು ವಜಾಗೊಳಿಸುವಂತೆ ಶಿಫಾರಸು ಮಾಡಿತ್ತು.

ಜುಲೈ 21ರಂದು ರಾವಲ್ಪಿಂಡಿ ಜಿಲ್ಲಾ ವಕೀಲರ ಸಂಘದ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ್ದ ನ್ಯಾ. ಸಿದ್ದೀಖಿ, ನ್ಯಾಯಾಂಗದಿಂದ ಅನುಕೂಲಕರ ತೀರ್ಪುಗಳನ್ನು ಪಡೆಯುವುದಕ್ಕಾಗಿ ನ್ಯಾಯಪೀಠದ ರಚನೆಯಲ್ಲಿ ಐಎಸ್‌ಐ ಹಸ್ತಕ್ಷೇಪ ನಡೆಸುತ್ತಿದೆ ಎಂದು ಆರೋಪಿಸಿದ್ದರು.

ನ್ಯಾ. ಸಿದ್ದೀಖ್ ವಿರುದ್ಧ ಸೇನೆ ಹೊರಿಸಿದ ಆರೋಪಗಳನ್ನು ಇಸ್ಲಾಮಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಅನ್ವರ್ ಕಾನ್ಸಿ ತಿರಸ್ಕರಿಸಿದರು.

ಬಳಿಕ, ಸೇನೆಯು ಪಾಕಿಸ್ತಾನದ ಮುಖ್ಯ ನ್ಯಾಯಾಧೀಶರಿಗೆ ದೂರು ನೀಡಿತ್ತು.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಮಿಯಾಂ ಸಾಕಿಬ್ ನಿಸಾರ್ ನೇತೃತ್ವದಲ್ಲಿ ಐವರು ಸದಸ್ಯರ ‘ಸುಪ್ರೀಂ ಜುಡಿಶಿಯಲ್ ಕೌನ್ಸಿಲ್’ ಸ್ಥಾಪಿಸಲಾಗಿತ್ತು.

ಹೈಕೋರ್ಟ್ ನ್ಯಾಯಾಧೀಶರ ವರ್ತನೆ ನ್ಯಾಯಾಧೀಶರ ಘನತೆಗೆ ತಕ್ಕುದಲ್ಲ ಎಂಬ ನಿರ್ಧಾರಕ್ಕೆ ಅದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News