ಕಾರವಾರದಿಂದ ಉಡುಪಿ ಜಿಲ್ಲಾ ಕಾರಾಗೃಹಕ್ಕೆ 60 ಕೈದಿಗಳ ವಾಪಸಾತಿ

Update: 2018-10-12 17:31 GMT

ಉಡುಪಿ, ಅ.12: ಬಂದಿಖಾನೆ ಇಲಾಖೆಯ ಅನುಮತಿಯ ಹಿನ್ನೆಲೆಯಲ್ಲಿ ಕಾರವಾರ ಜೈಲಿನಿಂದ 60 ವಿಚಾರಣಾಧೀನ ಕೈದಿಗಳನ್ನು ಬಿಗಿ ಭದ್ರತೆಯಲ್ಲಿ ಶುಕ್ರವಾರ ಉಡುಪಿ ಜಿಲ್ಲಾ ಕಾರಾಗೃಹಕ್ಕೆ ಕರೆತರಲಾಯಿತು.

ಹಿರಿಯಡ್ಕ ಸಮೀಪದ ಅಂಜಾರಿನಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದ ದುರಸ್ತಿ ಕಾಮಗಾರಿಯ ಹಿನ್ನೆಲೆಯಲ್ಲಿ ಇಲ್ಲಿರುವ ಕೈದಿಗಳನ್ನು ಈ ವರ್ಷದ ಜನವರಿ 20ರಂದು ಕಾರವಾರ ಮತ್ತು ಮಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿತ್ತು.

ಕೆಲ ದಿನಗಳ ಹಿಂದೆಯೇ ಕಾಮಗಾರಿ ಪೂರ್ಣಗೊಂಡಿದ್ದು ಇದೀಗ ಬಂದಿಖಾನೆಯ ಅನುಮತಿಯಂತೆ ಕಾರವಾರ ಜೈಲಿನಲ್ಲಿದ್ದ ಉಡುಪಿ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಕೈದಿಗಳನ್ನು ಇಂದು ವಾಪಸ್ ಕರೆಸಿಕೊಳ್ಳಲಾಗಿದೆ. ಇಂದು ಬೆಳಗ್ಗೆ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಶಸ್ತ್ರ ಮೀಸಲು ಪಡೆಯ ಬಿಗಿ ಭದ್ರತೆಯೊಂದಿಗೆ ಈ ಸ್ಥಳಾಂತರ ಕಾರ್ಯ ನೆರವೇರಿತು.

‘‘ಇದೇ ರೀತಿ ಮಂಗಳೂರಿನ ಕಾರಾಗೃಹದಲ್ಲಿರುವ ಉಡುಪಿ ಜಿಲ್ಲಾ ವ್ಯಾಪ್ತಿಗೊಳಪಡುವ ಕೈದಿಗಳನ್ನು ಇನ್ನೆರಡು ದಿನಗಳಲ್ಲಿ ಇಲ್ಲಿಗೆ ಕರೆತರಲಾಗುವುದು’’ ಎಂದು ಉಡುಪಿ ಜಿಲ್ಲಾ ಕಾರಾಗೃಹದ ಜೈಲರ್ ಸಂಜಯ್ ಜತ್ತಿ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News