ಮಾಲ್ದೀವ್ಸ್‌ನಲ್ಲಿ ಪ್ರಜಾಪ್ರಭುತ್ವ ಬಲವರ್ಧನೆಗೆ ನೆರವು: ಅಮೆರಿಕ

Update: 2018-10-12 17:53 GMT

ವಾಶಿಂಗ್ಟನ್, ಅ. 12: ಮಾಲ್ದೀವ್ಸ್‌ನಲ್ಲಿ ಪ್ರಜಾಪ್ರಭುತ್ವ, ಭದ್ರತೆ ಮತ್ತು ಸಮೃದ್ಧಿಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಆ ದೇಶದ ನೂತನ ಸರಕಾರದೊಂದಿಗೆ ಕೆಲಸ ಮಾಡುವ ಇಂಗಿತವನ್ನು ಅಮೆರಿಕ ವ್ಯಕ್ತಪಡಿಸಿದೆ.

‘‘ಮಾಲ್ದೀವ್ಸ್‌ನಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ದುರ್ಬಲಗೊಳಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅಮೆರಿಕ ಮತ್ತು ಅದರ ಮಿತ್ರದೇಶಗಳು ಕಳವಳದಿಂದ ನೋಡುತ್ತಿವೆ’’ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರರೊಬ್ಬರು ಹೇಳಿದರು.

ಅಮೆರಿಕದ ದಕ್ಷಿಣ ಮತ್ತು ಮಧ್ಯ ಏಶ್ಯ ಪ್ರತಿನಿಧಿ ಆ್ಯಲಿಸ್ ವೆಲ್ಸ್ ಮತ್ತು ಮಾಲ್ದೀವ್ಸ್‌ನ ನಿಯೋಜಿತ ಅಧ್ಯಕ್ಷ ಇಬ್ರಾಹೀಮ್ ಮುಹಮ್ಮದ್ ಸಾಲಿಹ್ ನಡುವೆ ಎರಡು ದಿನಗಳ ಕಾಲ ನಡೆದ ಮಾತುಕತೆಯ ಬಳಿಕ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.

‘‘ಮಾಲ್ದೀವ್ಸ್ ಜನರ ಇಚ್ಛೆಯನ್ನು ಗೌರವಿಸುವುದು ಅಗತ್ಯವಾಗಿದೆ’’ ಎಂದು ಅವರು ಹೇಳಿದರು.

ಮಾತುಕತೆಯ ಬಳಿಕ, ಸ್ಥಳೀಯ ಟಿವಿ ಚಾನೆಲೊಂದಕ್ಕೆ ಸಂದರ್ಶನ ನೀಡಿದ ಆ್ಯಲಿಸ್ ವೆಲ್ಸ್, ‘‘ಇದೊಂದು ನಿರ್ಣಾಯಕ ವಿಜಯವಾಗಿದೆ. ತನ್ನ ಸೋಲನ್ನು ಒಪ್ಪಿಕೊಳ್ಳುವ ಮೂಲಕ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ತಾನು ಜವಾಬ್ದಾರಿಯುತ ವಿರೋಧ ಪಕ್ಷ ನಾಯಕನಾಗುವುದಾಗಿ ಅವರು ಹೇಳಿದ್ದಾರೆ’’ ಎಂದರು.

ಅಧಿಕಾರ ಹಸ್ತಾಂತರ ಅನಿಶ್ಚಿತ

 ಸೆಪ್ಟಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸಾಲಿಹ್‌ರ ಮಾಲ್ದೀವಿಯನ್ ಡೆಮಾಕ್ರಟಿಕ್ ಪಾರ್ಟಿ ವಿಜಯ ಗಳಿಸಿದೆ. ಅಧಿಕಾರದಲ್ಲಿ ಉಳಿಯಲು ಯಮೀನ್ ಅಕ್ರಮ ನಡೆಸುತ್ತಾರೆ ಎಂಬ ವ್ಯಾಪಕ ಊಹಾಪೋಹಗಳ ನಡುವೆ ಚುನಾವಣೆ ನಡೆದಿತ್ತು.

ಸಾಲಿಹ್ ನವೆಂಬರ್‌ನಲ್ಲಿ ಅಧಿಕಾರ ಸ್ವೀಕರಿಸಬೇಕಾಗಿದೆ. ಆದರೆ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಯಮೀನ್‌ರ ಪಕ್ಷ ಬುಧವಾರ ಪೊಲೀಸ್ ದೂರು ದಾಖಲಿಸಿದೆ.

ಆದರೆ, ಫಲಿತಾಂಶವನ್ನು ಅದು ಆರಂಭದಲ್ಲಿ ಸ್ವೀಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News