ಪಾದೂರು ಪೈಪ್ ಲೈನ್ ಸಂತ್ರಸ್ತರಿಗೆ ಪರಿಹಾರದಲ್ಲಿ ವಂಚನೆ: ಲೋಕಾಯುಕ್ತರಿಗೆ ದೂರು

Update: 2018-10-13 13:54 GMT

ಉಡುಪಿ, ಅ.13: ಪಾದೂರು ಪೈಪ್‌ಲೈನ್ ಸಂತ್ರಸ್ತರಿಗೆ ಪರಿಹಾರ ನೀಡದೆ ವಂಚನೆ ಎಸಗಿರುವುದಾಗಿ ಆರೋಪಿಸಿ ಕಳತ್ತೂರು ಜನಜಾಗೃತಿ ಸಮಿತಿಯು ಅ.12ರಂದು ಲೋಕಾಯುಕ್ತರಿಗೆ ದೂರು ನೀಡಿದೆ.

ಕಾಪು ತಾಲೂಕಿನ ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿ ಒಂದನೆ ಹಂತದ ಪಾದೂರು ಕಚ್ಛಾತೈಲ ಸಂಗ್ರಹಣಾ ಘಟಕದ ಪೈಪ್‌ಲೈನ್ ಕಾಮಗಾರಿಯ ವೇಳೆ ಬಂಡೆ ಸ್ಪೋಟದಿಂದ ಪಾದೂರು ಮತ್ತು ಕಳತ್ತೂರು ಪರಿಸರದ ಸುತ್ತಮುತ್ತಲಿನ ಸುಮಾರು 120 ಮನೆಗಳಿಗೆ ಹಾನಿಯಾಗಿವೆ. ಈ ಬಗ್ಗೆ ಪರಿಹಾರ ಒದಗಿಸುವಂತೆ ಸಮಿತಿಯು ಪೈಪ್‌ಲೈನ್ ಕಾಮಗಾರಿಗೆ ತಡೆ ಯೊಡ್ಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅದಕ್ಕೆ ಸ್ಪಂದಿಸಿದ ಜಿಲ್ಲಾಧಿ ಕಾರಿ ಲೋಕೋಪಯೋಗಿ ಇಲಾಖೆ ಹಾಗೂ ಕಂದಾಯ ಇಲಾಖೆಗೆ ನಿರ್ದೇಶನ ನೀಡಿ ಜಂಟಿ ಸರ್ವೆ ನಡೆಸಿ ಹಾನಿಯ ಮೌಲ್ಯಮಾಪನವನ್ನು 2017ರ ನ.30 ರಂದು ನಡೆಸಲಾಗಿತ್ತು. 120 ಮನೆಗಳಿಗೆ 1,06,19,280ರೂ. ಹಾನಿಯಾಗಿ ರುವುದಾಗಿ ಈ ವರದಿಯಲ್ಲಿ ತಿಳಿಸಲಾಗಿತ್ತು.

ಈ ಮೌಲ್ಯಮಾಪನ ನಡೆಸಿ ಒಂದು ವರ್ಷ ಪೂರ್ಣವಾಗುತ್ತ ಬಂದರೂ ಐಎಸ್‌ಪಿಆರ್‌ಎಲ್ ಕಂಪೆನಿ ಮತ್ತು ಜಿಲ್ಲಾಡಳಿತ ಸಂತ್ರಸ್ತರಿಗೆ ಪರಿಹಾರ ನೀಡದೆ ವಂಚನೆ ಎಸಗಿದೆ ಎಂದು ಸಮಿತಿಯು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಸಂತ್ರಸ್ತರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಸಮಿತಿ ದೂರಿನಲ್ಲಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಅರುಣ್ ಶೆಟ್ಟಿ ಪಾದೂರು, ಜಿಪಂ ಸದಸ್ಯೆ ಶಿಲ್ಪಾ ಸುವರ್ಣ, ತಾಪಂ ಸದಸ್ಯೆ ಶಶಿಪ್ರಭಾ ಶೆಟ್ಟಿ, ಕುತ್ಯಾರು ಗ್ರಾಪಂ ಅಧ್ಯಕ್ಷ ಧೀರಜ್ ಶೆಟ್ಟಿ, ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್, ಸಮಿತಿಯ ಪದಾಧಿಕಾರಿಗಳಾದ ಶಿವರಾಮ ಶೆಟ್ಟಿ ಪಯ್ಯಿರು, ಅಲ್ವಿನ್ ಕುಂದರ್, ನಿತ್ಯಾನಂದ ಶೆಟ್ಟಿ, ದಿವಾಕರ ಡಿ.ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News