ಮಂಗಳೂರು ಕಸಾಯಿಖಾನೆ ಅಭಿವೃದ್ಧಿ: ಕೀಳು ಮಟ್ಟದ ರಾಜಕೀಯ ಬೇಡ- ಹರೀಶ್ ಕುಮಾರ್‌

Update: 2018-10-13 14:34 GMT

ಮಂಗಳೂರು, ಅ.13: ಮಂಗಳೂರು ಅಭಿವೃದ್ಧಿ ವಿಚಾರದಲ್ಲಿ ಕೀಳು ಮಟ್ಟದ ರಾಜಕೀಯ ಬೇಡ ಎಂದು ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯ ಪ್ರಕಾರ ಮಂಗಳೂರು ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಸೇರ್ಪಡೆಯಾಗಿದೆ. ಈ ಸಂದರ್ಭದಲ್ಲಿ ಕಸಾಯಿ ಖಾನೆಯನ್ನು ಈ ಯೋಜನೆಯಿಂದ ಹೊರಗಿಡುವುದು ಸಾಧ್ಯವಾಗುವುದಿಲ್ಲ. ಹಲವಾರು ಸಮಸ್ಯೆಗಳನ್ನೇದುರಿಸುತ್ತಿರುವ ನಗರದ ಹಳೆಯ ಕಸಾಯಿ ಖಾನೆಯನ್ನು ಆರೋಗ್ಯ ಹಾಗೂ ಶುಚಿತ್ವದ ದೃಷ್ಟಿಯಿಂದ ನವೀಕರಿಸುವ ಅಗತ್ಯವಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಈ ಹಿಂದೆ ವೆಂಕಯ್ಯ ನಾಯ್ಡು ಕೇಂದ್ರದ ನಗರಾಭಿವೃದ್ಧಿ ಸಚಿವರಾಗಿರುವಾಗಲೆ ನೇಮಕಗೊಂಡ ಸಮಿತಿ ಶಿಫಾರಸು ಮಾಡಿದೆ. ಅದರಂತೆ ನಗರದ ಸ್ಮಾರ್ಟ್ ಸಿಟಿ ಯೋಜನೆಗೆ ಹಣ ಬಿಡುಗಡೆ ಮಾಡಿರುವುದನ್ನು ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ. ಇದನ್ನು ಕೆಲವರು ರಾಜಕೀಯ ದೃಷ್ಟಿಕೋನದಿಂದ ನೋಡಿ ಹೇಳಿಕೆ ನೀಡುತ್ತಿರುವುದು ಸಚಿವರನ್ನು ನಿಂದಿಸುತ್ತಿರುವುದು ಸರಿಯಲ್ಲ. ಮಂಗಳೂರು ನಗರದ ಸ್ವಚ್ಛ ಮತ್ತು ಸುಂದರ ನಗರವಾಗಬೇಕಾಗಿದ್ದರೆ ಎಲ್ಲರ ಸಹಕಾರ ಅಗತ್ಯವಿದೆ ಮತ್ತು ಅಬಿವೃದ್ಧಿ ಯೋಜನೆಯನ್ನು ಈ ರೀತಿಯ ಕೀಳು ರಾಜಕೀಯ ಮಾಡುವುದನ್ನು ಕೈ ಬಿಡಬೇಕು ಎಂದು ಹರೀಶ್ ಕುಮಾರ್ ಹೇಳಿದ್ದಾರೆ.

ದೇಶದಲ್ಲಿ ಅಭಿವೃದ್ಧಿ ಯನ್ನು ನಿರ್ಲಕ್ಷಿಸಿಲಾಗಿದೆ ಎನ್ನುವುದಕ್ಕೆ ಗಂಗಾನದಿಯ ಶುದ್ಧೀಕರಣದ ವಿಚಾರದಲ್ಲಿ ಕೇಂದ್ರ ಸರಕಾರದ ನಿರ್ಲಕ್ಷದ ಬಗ್ಗೆ ಹೋರಾಟಗಾರ ಜಿ.ಡಿ.ಅರ್ಗವಾಲ್ ಅಲಿಯಾಸ್ ಸ್ವಾಮಿ ಜ್ಞಾನ ಸ್ವರೂಪ್ ಸಾನಂದ್ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿರುವುದು ಕೇಂದ್ರದ ಕಾರ್ಯವೈಖರಿಯನ್ನು ತೋರಿಸುತ್ತದೆ. ಕಾಂಗ್ರೆಸ್‌ನ ಮುಖಂಡ ಹಿಂದೆ ಪ್ರಧಾನಿಯಾಗಿದ್ದ ಮನಮೋಹನ್ ಸೀಂಗ್ ಅವರ ಬ ಳಿಯೂ ಗಂಗಾನದಿಯ ಉಳಿವಿಗಾಗಿ ಮನವಿ ಜಿ.ಡಿ.ಅಗರ್‌ವಾಲ್ ಮಾಡಿದ್ದ ಸಂದರ್ಭದಲ್ಲಿ ಆಗಿನ ಪ್ರಧಾನಿ ಅವರ ಮನವಿಗೆ ಮನ್ನಣೆ ನೀಡಿದ್ದರು. ಆದರೆ ಅದೇ ಅಗರ್‌ವಾಲ್ ಪ್ರಸಕ್ತ ತಮ್ಮ ಮನವಿಗೆ ಮನ್ನಣೆ ದೊರೆಯದೆ ಅಮರಣಾಂತ ಉಪವಾಸ ಮಾಡಿ ಸಾವಿಗೀಡಾಗಿರುವುದು ವಿಷಾದನೀಯ ಎಂದು ಹರೀಶ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮನಪಾ ಮೇಯರ್ ಭಾಸ್ಕರ.ಕೆ, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ಮಮತಾ ಗಟ್ಟಿ , ಖಾಲಿದ್ ಉಜಿರೆ, ದಿವಾಕರ ಗೌಡ, ಸುರೇಂದ್ರ ಕಾಂಬ್ಳಿ, ಸದಾಶಿವ ಶೆಟ್ಟಿ, ನವೀನ್ ಡಿ ಸೋಜ, ಸಂತೋಷ್ ಕುಮಾರ್, ಸದಾಶಿವ ಉಳ್ಳಾಲ, ಆರಿಫ್ ಬಾವ, ನೀರಜ್ ಪಾಲ್, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News