ಬನ್ನಂಜೆ ಬಸ್ ನಿಲ್ದಾಣದ ಕಾಮಗಾರಿ: 50 ವರ್ಷ ಹಳೆಯ ಮರಗಳ ಸ್ಥಳಾಂತರ

Update: 2018-10-13 14:57 GMT

ಉಡುಪಿ, ಅ.13: ಬನ್ನಂಜೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಕಾಮಗಾರಿಯ ಹಿನ್ನೆಲೆಯಲ್ಲಿ ಕೊಡಲಿ ಏಟಿನಿಂದ ನೆಲಕ್ಕೆ ಉರುಳಲಿದ್ದ 50 ವರ್ಷಗಳ ಹಳೆ ಮರಗಳನ್ನು ಅಲ್ಲೇ ಸಮೀಪಕ್ಕೆ ಸ್ಥಳಾಂತರಿಸಿ ನೆಡುವ ಕಾರ್ಯ ಶನಿವಾರ ನಡೆಯಿತು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ನಿರ್ಮಾಣಗೊಳ್ಳುವ ಪ್ರದೇಶದಲ್ಲಿದ್ದ 28 ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಅನುಮತಿ ನೀಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಪರಿಸರಾಕ್ತರ ಒಕ್ಕೂಟದ ಪ್ರೇಮಾನಂದ ಕಲ್ಮಾಡಿ ಹಾಗೂ ವಿನಯಚಂದ್ರ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಮರಗಳನ್ನು ಉಳಿಸುವಂತೆ ಕೋರಿಕೊಂಡಿದ್ದರು.

ಇತ್ತೀಚೆಗೆ ಈ ಪ್ರದೇಶಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಆರ್.ಶಂಕರ್ ಅವರಲ್ಲಿಯೂ ಮರಗಳನ್ನು ಉಳಿಸುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ್ದ ಸಚಿವರು ಮರಗಳನ್ನು ಸ್ಥಳಾಂತರಿಸುವಂತೆ ಸಂಬಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸಿದ್ದರು. ಅದರಂತೆ ಸ್ಥಳಾಂತರಿಸಬೇಕಾದ 16 ಮರಗಳನ್ನು ಗುರುತಿಸಲಾಗಿತ್ತು. ಅದರಲ್ಲಿ ಇಂದು ಎರಡು ಹೆಬ್ಬಾಲಸು ಮತ್ತು ಒಂದು ಕೋವೆ ಮರಗಳನ್ನು ಮಂಗಳೂರಿನ ಗ್ರೀನ್ ಬ್ರಿಗೇಡ್‌ನ ಜೀತ್ ಮಿಲನ್ ಮಾರ್ಗ ದರ್ಶನದಲ್ಲಿ ಸ್ಥಳಾಂತರಿಸಲಾಯಿತು.

ಈ ಮರಗಳನ್ನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಜಾಗದ ಗಡಿ ಪ್ರದೇಶ ದಲ್ಲಿ ಗುಂಡಿ ತೆಗೆದು, ಮೊದಲು ಗೋಣಿ ಹಾಕಿ, ಅದರ ಮೇಲೆ ಹೊಗೆ ಸುರಿದು, ನಂತರ ಸಾವಯವ ಗೊಬ್ಬರ ಹಾಕಿ ಮರಗಳನ್ನು ನೆಡಲಾಯಿತು. ಆರಂಭದ 15 ದಿನಗಳು ಪ್ರತಿದಿನ ಮೂರು ಬಾರಿ, ನಂತರ ಒಂದು ವರ್ಷಗಳ ಕಾಲ 2 ಎರಡು ಬಾರಿ ನೀರು ಹಾಕುತ್ತಿದ್ದರೆ ಮರ ಮತ್ತೆ ಚಿಗುರುತ್ತದೆ ಎಂದು ಜೀತ್ ಮಿಲನ್ ತಿಳಿಸಿದರು.

ಇಂದು ಸಂಜೆಯವರೆಗೆ ಮೂರು ಮರಗಳನ್ನು ಮಾತ್ರ ಸ್ಥಳಾಂತರಿಸಲು ಸಾಧ್ಯವಾಗಿರುವುದರಿಂದ ಉಳಿದ ಒಂದು ಹೆಬ್ಬಾಲಸು, ಎರಡು ಸಾಗುವಾನಿ, ಒಂದು ಉಪ್ಪಳಿ ಮರಗಳನ್ನು ಬುಧವಾರ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಸ್ಥಳಾಂತರ ಕಾರ್ಯದ ಎಲ್ಲ ಖರ್ಚು ವೆಚ್ಚಗಳನ್ನು ಬಸ್ ನಿಲ್ದಾಣ ಕಾಮ ಗಾರಿಯ ಗುತ್ತಿಗೆದಾರ ಶ್ರೀಧರ್ ಆಚಾರ್ಯ ವಹಿಸಿಕೊಂಡಿದ್ದಾರೆ ಎಂದು ಪರಿಸರಾಸಕ್ತರ ಒಕ್ಕೂಟದ ಪ್ರೇಮಾನಂದ ಕಲ್ಮಾಡಿ ಹಾಗೂ ವಿನಯಚಂದ್ರ ಸಾಸ್ತಾನ ತಿಳಿಸಿದ್ದಾರೆ.

ರಾತ್ರೋರಾತ್ರಿ 9 ಮರಗಳು ಧರೆಗೆ

ಈ ಜಾಗದಲ್ಲಿದ್ದ ಒಟ್ಟು 16 ಮರಗಳಲ್ಲಿ 14 ಮರಗಳನ್ನು ಗುರುತಿಸಿ ಸ್ಥಳಾಂತರಿಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ ಅರಣ್ಯಾಧಿಕಾರಿಗಳು ಹಾಗೂ ಗುತ್ತಿಗೆದಾರರು ನಿನ್ನೆ ರಾತ್ರೋ ರಾತ್ರಿ ಯಾವುದೇ ಮಾಹಿತಿ ನೀಡದೆ ಅಲ್ಲಿದ್ದ ಏಳು ಮರಗಳನ್ನು ಕಡಿದು ಉರುಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಪರಿಸರಾಸಕ್ತರ ಒಕ್ಕೂಟದವರು ಗುತ್ತಿಗೆದಾರ ಹಾಗೂ ಅರಣ್ಯಾಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದು ಕೊಂಡರೆನ್ನಲಾಗಿದೆ. ಅದರ ನಂತರ ಗುತ್ತಿಗೆದಾರರೇ ತಮ್ಮ ಸ್ವಂತ ಖರ್ಚಿನಲ್ಲಿ ಮರಗಳನ್ನು ಸ್ಥಳಾಂತರಿಸುವುದಾಗಿ ಹೇಳಿ ಇಂದು ಆ ಕಾರ್ಯವನ್ನು ಆರಂಭಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News