ಸರಕಾರಿ ಉದ್ಯೋಗಗಳಲ್ಲಿ ಶೇ.75 ಮೀಸಲಾತಿ ನೀಡುವಂತೆ ಕೇಂದ್ರ ಸಚಿವ ಅಠಾವಳೆ ಪ್ರತಿಪಾದನೆ

Update: 2018-10-13 15:21 GMT

ರಾಂಚಿ,ಅ.13: ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಮಿತಿಯನ್ನು ಶೇ.50ರಿಂದ ಶೇ.75ಕ್ಕೆ ಹೆಚ್ಚಿಸಬೇಕು ಎಂದು ಕೇಂದ್ರದ ಸಹಾಯಕ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ರಾಮದಾಸ್ ಅಠಾವಳೆ ಅವರು ಪ್ರತಿಪಾದಿಸಿದ್ದಾರೆ.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಎಸ್‌ಸಿ/ಎಸ್‌ಟಿಗಳು ಮತ್ತು ಒಬಿಸಿಗಳಿಗೆ ನೀಡಲಾಗಿರುವ ಶೇ.50 ಮೀಸಲಾತಿಗೆ ಯಾವುದೇ ಚ್ಯುತಿಯಾಗಬಾರದು. ಇತರ ಹಲವಾರು ಜಾತಿಗಳೂ ಮೀಸಲಾತಿಗಾಗಿ ಆಗ್ರಹಿಸುತ್ತಿವೆ. ಸಾಮಾನ್ಯ ವರ್ಗಕ್ಕಾಗಿರುವ ಶೇ.50ರಲ್ಲಿ ಶೇ.25 ಮೀಸಲಾತಿಯನ್ನು ಈ ಜಾತಿಗಳಿಗೆ ನೀಡಬೇಕು ಎಂದರು.

 ರಾಜ್ಯ ಸರಕಾರವು ಅಂತರ್ಜಾತೀಯ ವಿವಾಹಗಳಿಗೆ ಪ್ರೋತ್ಸಾಹ ಧನವನ್ನು ಈಗಿನ 50,000 ರೂ.ಗಳಿಂದ ಒಂದು ಲ.ರೂ.ಗಳಿಗೆ ಹೆಚ್ಚಿಸಬೇಕು. ಕೇಂದ್ರವು ಇಂತಹ ವಿವಾಹಗಳಿಗೆ 2.50 ಲ.ರೂ.ಪ್ರೋತ್ಸಾಹಧನವನ್ನು ನೀಡುತ್ತಿದೆ ಎಂದು ಅವರು ತಿಳಿಸಿದರು. ಜಾರ್ಖಂಡ್‌ನಲ್ಲಿ ಈಗಲೂ 20,500 ಜನರು ಶೌಚಗುಂಡಿ ನೈರ್ಮಲ್ಯ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ಪ್ರತಿ ಕುಟುಂಬಕ್ಕೆ 50,000 ರೂ.ನೆರವು ಒದಗಿಸುವ ಯೋಜನೆಯಿದೆ ಎಂದ ಅವರು,ಸರಕಾರಿ ಉದ್ಯೋಗಗಳಲ್ಲಿ ದಿವ್ಯಾಂಗರಿಗೆ ಮೀಸಲಾತಿಯನ್ನು ಈಗಿನ ಶೇ.4ರಿಂದ ಶೇ.5ಕ್ಕೆ ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

ಕೇಂದ್ರ ಸರಕಾರವು ದಲಿತ ವಿರೋಧಿಯಲ್ಲ ಎಂದ ಅವರು,ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನಿಲ್ದಾಣವೆಂದು ಮರುನಾಮಕರಣಗೊಳಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News