ತಿತ್ಲಿ ಸಂತ್ರಸ್ತ ಜಿಲ್ಲೆಗಳಿಗೆ 1200 ಕೋಟಿ ರೂ. ಮಧ್ಯಂತರ ಪರಿಹಾರ: ಕೇಂದ್ರಕ್ಕೆ ಚಂದ್ರಬಾಬು ನಾಯ್ಡು ಆಗ್ರಹ

Update: 2018-10-13 16:09 GMT

ಹೈದರಾಬಾದ್, ಅ.13: ತಿತ್ಲಿ ಚಂಡಮಾರುತದಿಂದಾಗಿ ತತ್ತರಿಸಿರುವ ಆಂಧ್ರಪ್ರದೇಶದ ಎರಡು ಜಿಲ್ಲೆಗಳು ಕೇಂದ್ರ ಸರಕಾರ ಆರ್ಥಿಕ ನೆರವು ನೀಡಬೇಕೆಂದು ಕೋರಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿಗೆ ಶನಿವಾರ ಪತ್ರ ಬರೆದಿದ್ದಾರೆ. ಚಂಡುಮಾರುತದಿಂದಾಗಿ ಹಾನಿಗೀಡಾಗಿರುವ ಶ್ರೀಕಾಕುಳಂ ಹಾಗೂ ವಿಜಯನಗರಂ ಜಿಲ್ಲೆಗಳಿಗೆ 1200 ಕೋಟಿ ರೂ. ಮಧ್ಯಾಂತರ ಪರಿಹಾರ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಒಡಿಶಾ, ಆಂಧ್ರ  ಕರಾವಳಿಗೆ ಗುರುವಾರ ಅಪ್ಪಳಿಸಿದ ತಿತ್ಲಿ ಚಂಡಮಾರುತಕ್ಕೆ ಈತನಕ 13 ಮಂದಿ ಸಾವನ್ನಪ್ಪಿದ್ದಾರೆ. ಒಡಿಶಾದಲ್ಲಿ ನಾಲ್ವರು, ಆಂಧ್ರದಲ್ಲಿ ಎಂಟು ಮಂದಿ ಹಾಗೂ ಪಶ್ಚಿಮಬಂಗಾಳದಲ್ಲಿ ಓರ್ವ ಬಲಿಯಾಗಿದ್ದಾರೆ. ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ ಭಾರೀ ಹಾನಿಯುಂಟು ಮಾಡಿರುವ ತಿತ್ಲಿ, ಶುಕ್ರವಾರದ ಹೊತ್ತಿಗೆ ದುರ್ಬಲಗೊಂಡು, ಪಶ್ಚಿಮಬಂಗಾಳವನ್ನು ಪ್ರವೇಶಿಸಿದ್ದು, ಅಲ್ಲಿ ಭಾರೀ ಮಳೆಯುಂಟು ಮಾಡಿದೆ.

ಆಂಧ್ರದ ಚಂಡಮಾರುತ ಪೀಡಿತ ಜಿಲ್ಲೆಯಾದ ಶ್ರೀಕಾಕುಳಂನ ಪಾಲಾಸ ಪಟ್ಟಣದಲ್ಲಿ ಮೊಕ್ಕಾಂ ಹೂಡಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಒಮ್ಮೆ ಪರಿಸ್ಥಿತಿ ಸಹಜತೆಗೆ ಮರಳಿದಲ್ಲಿ ತಾನು ಜಿಲ್ಲಾ ಪ್ರವಾಸವನ್ನು ಕೈಗೊಳ್ಳುವುದಾಗಿ ತಿಳಿಸಿದರು.

ಶ್ರೀಕಾಕುಳಂ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಚಂಡಮಾರುತವು ಭಾರೀ ನಾಶ,ನಷ್ಟವುಂಟು ಮಾಡಿದ್ದು ಸೊತ್ತುಗಳು, ಮೂಲಸೌಕರ್ಯಗಳು, ಕೃಷಿ ಹಾಗೂ ಮನೆಗಳಿಗೆ ಭಾರೀ ಹಾನಿಯಾಗಿದ್ದು, ಜನರು ಯಾತನೆ ಹಾಗೂ ಸಂಕಷ್ಟಕ್ಕೆ ಸಿಲುಕಿದ್ದಾರೆ’’ ಎಂದು ನಾಯ್ಡು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News