‘ಮಾಹಿತಿ ಸ್ಥಳೀಯಕರಣ’ ನಿಷೇಧಕ್ಕೆ ಅಮೆರಿಕ ಮುಂದು: ಸಮೀಪಿಸುತ್ತಿರುವ ಆರ್‌ಬಿಐ ಗಡುವು

Update: 2018-10-13 16:51 GMT

ವಾಶಿಂಗ್ಟನ್, ಅ. 13: ಜಾಗತಿಕ ಮಾಹಿತಿ ಹರಿವನ್ನು ನಿಯಂತ್ರಿಸುವ (ಮಾಹಿತಿ ಸ್ಥಳೀಯಕರಣ) ಭಾರತ ಸರಕಾರದ ನಿರ್ಧಾರದ ವಿರುದ್ಧ ಅಮೆರಿಕದ ಪ್ರಮುಖ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈಗಾಗಲೇ ಧ್ವನಿಯೆತ್ತಿವೆ. ಈಗ, ಈ ‘ಮಾಹಿತಿ ಸ್ಥಳೀಯಕರಣ’ದ ಕಲ್ಪನೆಯನ್ನೇ ನಿಷೇಧಿಸಲು ಅಮೆರಿಕ ಮುಂದಾಗಿದೆ.

ಮಾಹಿತಿ ಸ್ಥಳೀಯಕರಣವೆಂದರೆ, ನಿರ್ದಿಷ್ಟ ಮಾಹಿತಿಯು ಯಾವ ದೇಶದಲ್ಲಿ ಸೃಷ್ಟಿಯಾಗಿದೆಯೋ, ಅದೇ ದೇಶದಲ್ಲಿ ಆ ಮಾಹಿತಿಯನ್ನೊಳಗೊಂಡ ಉಪಕರಣಗಳನ್ನು ಇಡುವುದು.

ಮಾಹಿತಿ ಹರಿವನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಪ್ರಿಲ್‌ನಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿ, ಎಲ್ಲ ಸಿಸ್ಟಮ್ ಪ್ರೊವೈಡರ್‌ಗಳು ತಾವು ನಿರ್ವಹಿಸುವ ಪಾವತಿ ವ್ಯವಸ್ಥೆಗಳಿಗೆ ಸಂಬಂಧಿಸಿದ ಸಂಪೂರ್ಣ ಅಂಕಿಅಂಶಗಳನ್ನು ಭಾರತದಲ್ಲಿರುವ ಸಿಸ್ಟಮ್‌ವೊಂದರಲ್ಲಿ ಮಾತ್ರ ಸಂಗ್ರಹಿಸಿಡಬೇಕು ಎಂದು ಆದೇಶ ನೀಡಿತ್ತು. ಈ ಆದೇಶ ಪಾಲನೆಗೆ ಅದು ಅಕ್ಟೋಬರ್ 15ರ ಗಡುವು ನೀಡಿತ್ತು.

‘‘ಗಡಿಯಾಚೀಚೆಗೆ ಮಾಹಿತಿಯ ಮುಕ್ತ ಹರಿವು, ದತ್ತಾಂಶಗಳ ಮುಕ್ತ ಹರಿವನ್ನು ಖಾತರಿಪಡಿಸಲು ಮಾಹಿತಿ ಸ್ಥಳೀಯಕರಣವನ್ನು ನಿಷೇಧಿಸಲು ನಾವು ಬಯಸುತ್ತೇವೆ’’ ಎಂದು ಅಮೆರಿಕದ ಉಪ ವ್ಯಾಪಾರ ಪ್ರತಿನಿಧಿ ಹಾಗೂ ಡಬ್ಲುಟಿಒಗೆ ಅಮೆರಿಕದ ರಾಯಭಾರಿ ಡೆನಿಸ್ ಶೀ ಶುಕ್ರವಾರ ವಾಶಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News