ಉಡುಪಿ: ರೈಲಿನಲ್ಲಿ ಅಮಲು ಭರಿತ ಮಜ್ಜಿಗೆ ನೀಡಿ ನಗ-ನಗದು ಲೂಟಿ

Update: 2018-10-13 16:57 GMT
ರಾಮಚಂದ್ರ ಆಚಾರ್ಯ

ಉಡುಪಿ, ಅ.13: ಅಕ್ಕನೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಉಡುಪಿ ರೈಲ್ವೆ ಯಾತ್ರಿ ಸಂಘದ ಪದಾಧಿಕಾರಿಯೇ ಅಪರಿಚಿತರು ನೀಡಿದ ಅಮಲು ಭರಿಸುವ ಮಜ್ಜಿಗೆಯನ್ನು ಸೇವಿಸಿ ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳೆದುಕೊಂಡ ಬಗ್ಗೆ ವರದಿಯಾಗಿದೆ.

ಮಜ್ಜಿಗೆ ಸೇವಿಸಿ ಪ್ರಜ್ಞೆ ಕಳೆದುಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದ ಉಡುಪಿ ಕಿನ್ನಿಮುಲ್ಕಿ ನಿವಾಸಿಯಾಗಿರುವ ರೈಲ್ವೆ ಯಾತ್ರಿ ಸಂಘದ ಕೋಶಾಧಿಕಾರಿ ರಾಮಚಂದ್ರ ಆಚಾರ್ಯ (60) ಹಾಗೂ ಅವರ ಅಕ್ಕ ಕಾರ್ಕಳ ಬೈಲೂರಿನ ಕೃಷ್ಣ ಭಟ್ ಎಂಬವರ ಪತ್ನಿ ರಾಧಮ್ಮ (75) ಎಂಬವರು ಅ.12ರಂದು ಬೆಳಗಿನ ಜಾವ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದು ಇಂದು ಮಧ್ಯಾಹ್ನ  ಬಿಡುಗಡೆ ಹೊಂದಿದ್ದಾರೆ.

ಅಪರಿಚಿತರು ರಾಮಚಂದ್ರರ ಪರ್ಸ್‌ನಲ್ಲಿದ್ದ 15 ಸಾವಿರ ರೂ., ಪ್ಯಾಂಟ್ ಕಿಸೆಯಲ್ಲಿದ್ದ 15 ಸಾವಿರ ರೂ., ಮೊಬೈಲ್, ನಾಣ್ಯಗಳು ಹಾಗೂ 2 ಸಾವಿರ ರೂ. ಮೌಲ್ಯದ ಹೊಸ ಬಟ್ಟೆಗಳು ಮತ್ತು ರಾಧಾಮ್ಮರ ಒಂದು ಕಿವಿಯ ಓಲೆ, ಎರಡು ಉಂಗುರ, ಒಂದು ಚಿನ್ನದ ಸರ, 15 ಸಾವಿರ ರೂ. ನಗು ದೋಚಿ ರುವುದಾಗಿ ತಿಳಿದು ಬಂದಿದೆ.

ಘಟನೆಯ ವಿವರ: ತನ್ನ ಭಾವನ ವೈಕುಂಠ ಸಮಾರಾಧನೆಗೆ ರಾಮಚಂದ್ರ ಆಚಾರ್ಯ ಹಾಗೂ ಅವರ ಅಕ್ಕಂದಿರಾದ ರಾಧಮ್ಮ, ಸೀಮಾ ರಾವ್, ತುಳಸಿ ಉಪಾಧ್ಯಾಯ ಮಹಾರಾಷ್ಟ್ರ ರಾಜ್ಯದ ನಾಸಿಕ್‌ನಲ್ಲಿರುವ ಪೇಜಾವರ ಮಠಕ್ಕೆ ಅ.7ರಂದು ರೈಲಿನಲ್ಲಿ ಉಡುಪಿಯಿಂದ ಹೋಗಿದ್ದರು. ಅಲ್ಲಿ ಕಾರ್ಯ ಮುಗಿಸಿದ ಈ ನಾಲ್ವರು ಅ.11ರಂದು ಬೆಳಗಿನ ಜಾವ 6ಗಂಟೆ ಸುಮಾರಿಗೆ ನಾಸಿಕ್‌ನಿಂದ ಮಂಗಳ -ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಉಡುಪಿಗೆ ಹೊರಟಿದ್ದರು.

ಇವರಲ್ಲಿ ರಾಧಮ್ಮ ಮತ್ತು ರಾಮಚಂದ್ರ ಎಸ್-3 ಬೋಗಿಯಲ್ಲಿ ಹಾಗೂ ಸೀಮಾ ಮತ್ತು ತುಳಸಿ ಎಸ್-2 ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಎಸ್-3 ಬೋಗಿಯಲ್ಲಿದ್ದ ಸುಮಾರು 50-60ವರ್ಷ ಪ್ರಾಯದ ಇಬ್ಬರು ಅಪರಿಚಿತ ವ್ಯಕ್ತಿಗಳು, ರಾಧಮ್ಮ ಹಾಗೂ ರಾಮಚಂದ್ರ ಅವರನ್ನು ಪರಿಚಯಿಸಿಕೊಂಡು ಅವರ ಸ್ನೇಹ ಸಂಪಾದಿಸಿದರು. ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ ಅಪರಿಚಿತರು ಕೇರಳಕ್ಕೆ ಹೋಗುತ್ತಿರುವ ತಾವು ದೆಹಲಿಯ ಬಟ್ಟೆ ವ್ಯಾಪಾರಿಗಳು ಎಂದು ಹೇಳಿಕೊಂಡಿದ್ದರು. ಹೀಗೆ ಪ್ರಯಾಣದ ಉದ್ದಕ್ಕೂ ಮಾತುಕತೆ ನಡೆಸುತ್ತ ಆತ್ಮೀಯರಾದರು.

ಸಂಜೆ ವೇಳೆ ರೈಲು ಮಹಾರಾಷ್ಟ್ರ ರಾಜ್ಯದ ಚಿಪ್ಲೂಣ್ ನಿಲ್ದಾಣದಲ್ಲಿ ನಿಲುಗಡೆಗೊಂಡಿತು. ಆಗ ರಾಧಮ್ಮ ಶೌಚಾಲಯಕ್ಕೆ ಹಾಗೂ ರಾಮಚಂದ್ರ ಆಚಾರ್ಯ ರೈಲಿನಿಂದ ಇಳಿದು ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಹೊರಗಡೆ ಅಂಗಡಿಯಿಂದ ಮಜ್ಜಿಗೆ ಪ್ಯಾಕೆಟ್ ತಂದು ರಾಮಚಂದ್ರ ಹಾಗೂ ರಾಧಮ್ಮರಿಗೆ ನೀಡಿ, ಕುಡಿಯುವಂತೆ ಒತ್ತಾಯಿಸಿದರು. ಹೀಗೆ ಒತ್ತಾಯಕ್ಕೆ ಮಣಿದ ಇವರಿಬ್ಬರು ಮಜ್ಜಿಗೆಯನ್ನು ಕುಡಿದರು. ರಾಮ ಚಂದ್ರ ಆಚಾರ್ಯ ಅರ್ಧ ಮಜ್ಜಿಗೆ ಕುಡಿದರೆ, ರಾಧಮ್ಮ ಎಲ್ಲ ಮಜ್ಜಿಗೆಯನ್ನು ಕುಡಿದಿದ್ದರು. ಸ್ವಲ್ಪ ಹೊತ್ತಿನಲ್ಲೇ ಇವರಿಬ್ಬರು ಪ್ರಜ್ಞೆ ತಪ್ಪಿ ನಿದ್ದೆಗೆ ಜಾರಿದರೆನ್ನಲಾಗಿದೆ.

ಅ.12ರಂದು ನಸುಕಿನ ಒಂದೂವರೆ ಗಂಟೆ ಸುಮಾರಿಗೆ ರೈಲು ಕುಂದಾಪುರ ತಲುಪುವಾಗ ರಾಮಚಂದ್ರ ಆಚಾರ್ಯ ಎಚ್ಚರಗೊಂಡರು. ಕಿಸೆಯಲ್ಲಿದ್ದ ಪರ್ಸ್, ಹಣವನ್ನು ಅಪರಿಚಿತರಿಬ್ಬರು ದೋಚಿಕೊಂಡು ಹೋಗಿರುವುದು ಅವರಿಗೆ ತಿಳಿಯಿತು. ಇನ್ನೊಂದು ಬೋಗಿಯಲ್ಲಿರುವ ತನ್ನ ಅಕ್ಕಂದಿರ ಬಳಿ ಹೋಗಿ ವಿಷಯ ತಿಳಿಸಿದರು. ಪೂರ್ತಿ ಮಜ್ಜಿಗೆ ಸೇವಿಸಿದ್ದ ರಾಧಾಮ್ಮ ಪ್ರಜ್ಞೆ ಕಳೆದುಕೊಂಡು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ರೈಲು ಇಂದ್ರಾಳಿ ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ರೈಲ್ವೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ಬೆಳಗಿನ ಜಾವ ಇಬ್ಬರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.

‘ಅಮಲು ಭರಿಸುವ ಮಜ್ಜಿಗೆ ಕುಡಿದ ಪರಿಣಾಮ ನಾವಿಬ್ಬರು ಪ್ರಜ್ಞೆ ಕಳೆದು ಕೊಂಡೆವು. ನನ್ನಲ್ಲಿದ್ದ ನಗದು ಹಾಗೂ ಮೊಬೈಲ್ ಹಾಗೂ ನನ್ನ ಅಕ್ಕನ ಮೈ ಮೇಲಿದ್ದ ಚಿನ್ನಾಭರಣ ದೋಚಿಕೊಂಡು ಹೋಗಿದ್ದಾರೆ. ಅಕ್ಕ ಬದಿಯಾಗಿ ಮಲಗಿದ್ದರಿಂದ ಅವರ ಒಂದು ಕಿವಿಯ ಓಲೆಯನ್ನು ಬಿಟ್ಟು ಹೋಗಿದ್ದಾರೆ. ಅಕ್ಕನ ಹಳೆಯ ಬಟ್ಟೆಗಳ ಬ್ಯಾಗ್ ಮಧ್ಯೆ ಇಟ್ಟಿದ್ದ ಚಿನ್ನಾಭರಣಗಳ ಗಂಟು ಅಪರಿಚಿತರಿಗೆ ತಿಳಿಯದೆ ಉಳಿದುಕೊಂಡಿದೆ’

-ರಾಮಚಂದ್ರ ಆಚಾರ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News