ಸುಬ್ರಹ್ಮಣ್ಯಶ್ರೀಗಳ ಉಪವಾಸ ಸ್ಥಗಿತಕ್ಕೆ ಪೇಜಾವರಶ್ರೀ ಮನವಿ
Update: 2018-10-13 22:29 IST
ಉಡುಪಿ, ಅ.13: ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥರು ತಮಗಾಗಿರುವ ತೊಂದರೆ, ಉಪಟಳಗಳ ಬಗ್ಗೆ ವಿಷಾದ ಪಟ್ಟು ಉಪವಾಸ ಆರಂಭಿಸಿದ್ದಾರೆಂಬುದನ್ನು ತಿಳಿದು ತಮಗೆ ತುಂಬಾ ಕಳವಳವಾಗಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಹೇಳಿದ್ದಾರೆ.
ಪತ್ರಿಕೆಗಳಿಗೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ ಪೇಜಾವರಶ್ರೀ, ಈಗ ನಾಲ್ಕು ದಿನಗಳ ಶಾರದ ಪೂಜೆ ಆರಂಭವಾಗುವುದರಿಂದ ನಾನು ಒಂದೇ ಕಡೆ ಇರಬೇಕಾಗಿದೆ. ನವರಾತ್ರಿ ಉತ್ಸವ ಮುಗಿದ ಕೂಡಲೇ ನಾನು ಸುಬ್ರಹ್ಮಣ್ಯಕ್ಕೆ ಆಗಮಿಸಿ ಸಂಬಂಧಪಟ್ಟ ಎಲ್ಲರನ್ನೂ ಸಂಪರ್ಕಿಸಿ ಈ ಸಮಸ್ಯೆಯನ್ನು ಬಗೆಹರಿಸಲು ವಿಶೇಷ ಪ್ರಯತ್ನವನ್ನು ಮಾಡುತ್ತೇನೆ. ಆದ್ದರಿಂದ ಸುಬ್ರಹ್ಮಣ್ಯ ಶ್ರೀಗಳು ಸದ್ಯಕ್ಕೆ ತಮ್ಮ ಉಪವಾಸವನ್ನು ಸ್ಥಗಿತಗೊಳಿಸಬೇಕಾಗಿ ಅಪೇಕ್ಷಿಸುತ್ತೇವೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.