ಅಂಗೈಯಲ್ಲಿ ಬೆಳೆ ಸಮೀಕ್ಷೆ ಮಾಹಿತಿ ‘ಬೆಳೆ ದರ್ಶಕ್’

Update: 2018-10-13 17:00 GMT

ಉಡುಪಿ, ಅ.13: ಬೆಳೆ ಸಮೀಕ್ಷೆಗೆ ಸಂಬಂಧಿಸಿದ ಮಾಹಿತಿ ಹಾಗೂ ಸಮೀಕ್ಷೆ ನಡೆಸುವವರ ವಿವರ ಈಗ ರೈತರ ಅಂಗೈನಲ್ಲೇ ಲಭ್ಯವಾಗಲಿದೆ. ರಾಜ್ಯ ಸರಕಾರದ ಇ-ಆಡಳಿತ ಇಲಾಖೆ ಪರಿಚಯಿಸಿರುವ ‘ಬೆಳೆ ದರ್ಶಕ್’ ಆ್ಯಪ್ ಮೂಲಕ ರೈತರು ತಮ್ಮ ಮೊಬೈಲ್‌ನಲ್ಲೇ ತಮ್ಮ ಹೊಲದ ಸಮೀಕ್ಷೆ ನಡೆದ ಸಚಿತ್ರ ವರದಿ, ನಡೆದಿಲ್ಲವಾದರೆ ಸಮೀಕ್ಷೆ ನಡೆಸುವವರ ಹೆಸರು, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ಪಡೆಯಬಹುದಾಗಿದೆ.

ಪ್ಲೇಸ್ಟೋರ್‌ನಲ್ಲಿ ಲಭ್ಯವಿರುವ ಬೆಳೆ ದರ್ಶಕ್ ಆ್ಯಂಡ್ರಾಯ್ಡಾ ಫೋನ್ ಅಪ್ಲಿಕೇಷನ್ ಉಚಿತವಾಗಿದೆ.ಇದನ್ನು ಬಳಸುವ ವಿಧಾನವೂ ಅತ್ಯಂತ ಸರಳ ವಾಗಿದೆ. ಬೆಳೆ ಸಮೀಕ್ಷೆ ಕಾರ್ಯ ಈವರೆಗೂ ನಿಮ್ಮಲ್ಲಿ ಆರಂಭವಾಗದಿದ್ದರೆ ಕರೆ ಮಾಡಿ ಸಮೀಕ್ಷೆ ನಡೆಸುವವರನ್ನು ಸಂಪರ್ಕಿಸಬಹುದು. ದಾಖಲಿಸಿರುವ ಮಾಹಿತಿ ಸರಿಯಾಗಿಲ್ಲದಿದ್ದರೆ ತಾಲೂಕು ಕಚೇರಿಗೂ ದೂರು ನೀಡಬಹುದು.

ಬಳಕೆಗೆ ಅತ್ಯಂತ ಸರಳವಾದ ಎರಡು ಪರದೆಯುಳ್ಳ ಆ್ಯಪ್ ಇದಾಗಿದೆ. ಮೊದಲ ಪರದೆಯಲ್ಲಿ ಬೆಳೆ ಸಮೀಕ್ಷೆ ವರ್ಷ, ಋತುಮಾನ, ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೇ ನಂಬರ್ ಹಾಕಿ ವಿವರ ಪಡೆಯಬಹುದು. ಇದಾದ ನಂತರ ಸರ್ವೇ ನಂಬರ್/ಹಿಸ್ಸಾ ವಿವರ ಸಿಗಲಿದೆ. ಇಲ್ಲಿ ಒಂದೇ ಸರ್ವೇ ನಂಬರ್‌ನಲ್ಲಿ ಒಂದಕ್ಕಿಂತ ಹೆಚ್ಚು ಹಿಸ್ಸೆಗಳು ಇದ್ದಲ್ಲಿ ಅದನ್ನು ಆಯ್ಕೆ ಮಾಡಬೇಕು. ಕೊನೆಯದಾಗಿ ಮಾಲಕರ ವಿವರ ಪಡೆದು ಇದನ್ನು ಖಚಿತ ಪಡಿಸಿಕೊಳ್ಳಬಹುದು.

ಇದಾದ ನಂತರ ಗ್ರಾಮದ ಬೆಳೆ ಸಮೀಕ್ಷೆ ನಡೆಸುವವರ ವಿವರ ಹಾಗೂ ದಾಖಲಿಸಿದ ಬೆಳೆ ವಿವರಕ್ಕೆ ಪ್ರತ್ಯೇಕ ಎರಡು ಗುಂಡಿಗಳಿವೆ. ಸಮೀಕ್ಷೆದಾರರ ವಿವರ ಕ್ಲಿಕ್ಕಿಸಿದರೆ ಅವರ ಹೆಸರು ಹಾಗೂ ಮೊಬೈಲ್ ಸಂಖ್ಯೆ ಪರದೆ ಮೇಲೆ ಮೂಡಲಿದೆ. ದಾಖಲಿಸಿದ ಬೆಳೆ ವಿವರ ಕ್ಲಿಕ್ಕಿಸಿದರೆ ಬೆಳೆ ಹೆಸರು, ವಿಸ್ತೀರ್ಣ, ವರ್ಗ ಹಾಗೂ ಚಿತ್ರ ಸಿಗಲಿದೆ. ಒಂದೊಮ್ಮೆ ಇಲ್ಲಿ ದಾಖಲಾದ ವಿವರ ಸರಿ ಇಲ್ಲ ಎಂದಾದಲ್ಲಿ ಆಯಾ ವ್ಯಾಪ್ತಿಯ ತಾಲೂಕು ಕಚೇರಿಯನ್ನು ಸಂಪರ್ಕಿಸಬಹುದು ಎಂಬ ಒಕ್ಕಣೆಯೂ ಈ ಪರದೆಯಲ್ಲಿ ಮೂಡುತ್ತದೆ.

ಪ್ಲೇಸ್ಟೋರ್‌ನಲ್ಲಿ ಬೆಳೆ ದರ್ಶಕ್ ಆ್ಯಪ್ ಲಭ್ಯ. ಕೇವಲ 3.8 ಎಂಬಿ ಗಾತ್ರದ ಈ ಆ್ಯಪ್ ಈಗಾಗಲೇ ಸಾವಿರಕ್ಕೂ ಅಧಿಕ ಡೌನ್‌ಲೋಡ್ ಆಗಿದೆ. ಇದರ ರೇಟಿಂಗ್ 4.1 ಇದೆ. ಈಗಾಗಲೇ ಇದರ ಬಳಕೆದಾರರು ಆ್ಯಪ್ ಕುರಿತ ರಿವ್ಯೆ ನಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News