ದೇಶದ ಸಮಸ್ಯೆಗಳಿಗೆ ಕುರುಡಾದ ಮಾಧ್ಯಮಗಳು: ಸಿಬಂಥಿ ಪದ್ಮನಾಭ

Update: 2018-10-13 17:10 GMT

ಭಟ್ಕಳ, ಅ.13: ಮಾಧ್ಯಮಗಳ ಪ್ರಮುಖ ಕೆಲಸ ಮಾಹಿತಿ, ಶಿಕ್ಷಣ, ಮನರಂಜನೆಯಾಗಿದ್ದು ಇಂದಿನ ಮಾಧ್ಯಮಗಳು ಮಾಹಿತಿ ನೀಡುವುದನ್ನು ಬಿಟ್ಟು ಕೇವಲ ಮನರಂಜನೆಗೆ ಮಾತ್ರ ಸೀಮಿತಗೊಂಡಿವೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸಿಬಂಥಿ ಪದ್ಮನಾಭ ಹೇಳಿದ್ದಾರೆ.

ಅವರು ಶನಿವಾರ ಇಲ್ಲಿನ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಸಂಸ್ಥೆಯು ಮಂಗಳೂರು ಮಾಧ್ಯಮ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ಐದು ದಿನಗಳ ಪತ್ರಿಕೋದ್ಯಮ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಹೆಚ್ಚಿನ ಮಾಧ್ಯಮಗಳು ದೇಶದ ಪ್ರಮುಖ ಸಮಸ್ಯೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಬದಲು, ಅನಾವಶ್ಯಕ ವಿಷಯಗಳ ಚರ್ಚಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಳೆದ 15 ವರ್ಷಗಳಿಂದ ಇದೇ ತೆರನಾದ ಟ್ರೆಂಡ್ ರೂಪಿಸಲಾಗುತ್ತಿದೆ. ಇದರಿಂದಾಗಿ ಮಾಧ್ಯಮ ಕ್ಷೇತ್ರ ಇಂದು ತನ್ನತನವನ್ನು ಕಳೆದುಕೊಳ್ಳುತ್ತಲಿದ್ದು ವಿದ್ಯಾರ್ಥಿಗಳು ತಮ್ಮನ್ನು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸರಿ ದಿಸೆಯಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸಿದರು.

ಮರ್ಕಝಿ ಖಲೀಫಾ ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಜಿ ಮೌಲಾನ ಖ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಮದನಿ ಮಾತನಾಡಿ, ಇಸ್ಲಾಮ್ ಧರ್ಮವು ಮಾಧ್ಯಮ ಕ್ಷೇತ್ರಕ್ಕೆ ಪ್ರಮುಖ ಆದ್ಯತೆ ನೀಡಿದ್ದು ಇಂದಿನ ಯುವ ಸಮೂಹ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾರ್ಯಾಗಾರದ ಸಂಚಾಲಕ ಮಂಗಳೂರು ಮಾಧ್ಯಮ ಕೇಂದ್ರ ನಿರ್ದೇಶಕ ಅಬ್ದುಸ್ಸಲಾಮ್ ಪುತ್ತಿಗೆ ಕಾರ್ಯಾಗಾರದಲ್ಲಿ ಪಾಲಿಸಬೇಕಾದ ನಿಯಮಗಳನ್ನು ವಿವರಿಸಿ ಮಾಧ್ಯಮ ಕ್ಷೇತ್ರದ ಮಹತ್ವದ ಬಗ್ಗೆ ತಿಳಿಸಿದರು.

ತಂಝೀಮ್ ಸಂಸ್ಥೆಯ ಮಾಧ್ಯಮ ಸಮಿತಿಯ ಸಂಚಾಲಕ ಅಫ್ತಾಬ್ ಹುಸೈನ್ ಕೋಲಾ ಪ್ರಾಸ್ತಾವಿಕವಾಗಿ ಮಾತನಾಡಿ, ಐದು ದಿನಗಳ ಈ ಕಾರ್ಯಾಗಾರವು ಕೇವಲ ವಿದ್ಯಾರ್ಥಿಗಳನ್ನು ಮಾಧ್ಯಮ ರಂಗಕ್ಕೆ ಪರಿಚಯಿಸುವುದಾಗಿದೆ. ಇದರ ಮೂಲಕ ತಮ್ಮ ಮುಂದೆ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳು ಮುಂದೆ ಬಂದಲ್ಲಿ ತಂಝೀಮ್ ಸಂಸ್ಥೆ ಅವಶ್ಯಕ ಸಲಹೆ ಹಾಗೂ ಸಹಕಾರ ನೀಡಿ ಉನ್ನತ ವ್ಯಾಸಂಗಕ್ಕಾಗಿ ಸ್ಕಾಲರ್‌ಶಿಪ್ ನೀಡಿ ಪ್ರೋತ್ಸಾಹಿಸುತ್ತದೆ ಎಂದರು.

ತಂಝೀಮ್ ಸಂಸ್ಥೆಯ ಅಧ್ಯಕ್ಷ ಮುಝಮ್ಮಿಲ್ ಖಾಝಿಯಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ತಂಝೀಮ್ ಉಪಾಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಜಾಫರ್ ಮೊಹತೆಶಮ್, ಇನಾಯತುಲ್ಲಾ ಗವಾಯಿ ಮುಂತಾದವರು ಉಪಸ್ಥಿತರಿದ್ದರು. ಖಾಜಿ ಜಮಾಅತುಲ್ ಮುಸ್ಲಿಮೀನ್ ಮೌಲಾನ ಮುಹಮ್ಮದ್ ಇಕ್ಬಾಲ್ ಮುಲ್ಲಾ ನದ್ವಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಮೌಲಾನ ಸೈಯದ್ ಯಾಸಿರ್ ಬರ್ಮಾವರ್ ನದ್ವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News