ಕಳವು ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

Update: 2018-10-13 17:20 GMT

ಮಂಗಳೂರು, ಅ.13: ಮತಪೆಟ್ಟಿಗೆ ಕಳವು ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದ ಆರೋಪಿಯೋರ್ವನನ್ನು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರು ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಕೇರಳದ ತಿರುವನಂತಪುರಂ ಕಟ್ಟಕ್ಕಾಡ್ ನಿವಾಸಿ ಉಣ್ಣಿಕೃಷ್ಣನ್ ಯಾನೆ ಬಿನು (40) ಬಂಧಿತ ಆರೋಪಿ.

2013ರ ಜ.21ರಂದು ಹಳೆ ತಾಲೂಕು ಕಚೇರಿಯ ಭದ್ರತಾ ಕೊಠಡಿಯಿಂದ ಆರು ಮತ ಪೆಟ್ಟಿಗೆಗಳನ್ನು ಆರೋಪಿಗಳಾದ ಉಣ್ಣಿಕೃಷ್ಣನ್ ಮತ್ತು ಗಣೇಶ ಪೂಜಾರಿ ಸೇರಿ ಕಳವು ಮಾಡಿದ್ದರು. ಅಂದಿನ ರಾತ್ರಿ ಗಸ್ತಿನಲ್ಲಿದ್ದ ಪಿಎಸ್ಸೈ ಶಿವರುದ್ರಪ್ಪ ಮೇಟಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಪ್ರಕರಣದಲ್ಲಿ ಸಿಜೆಎಂ 2ನೇ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2014ರ ಜು.14ರಂದು ಆರೋಪಿಗಳು ಖುಲಾಸೆಗೊಂಡಿದ್ದರು.

ಆದರೆ ಮೇಲ್ಮನವಿ ಸಲ್ಲಿಸಿದ ಸಿಜೆಎಂ 2ನೇ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಮಾರುತಿ ಡಿ. ಮಾಂಗ್ಲಿ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದಲ್ಲಿ ವಾದ ವಿವಾದ ನಡೆದು 2018ರ ಆ.31ರಂದು ನ್ಯಾಯಾಲಯವು ಆರೋಪಿಗಳನ್ನು ದೋಷಿಗಳೆಂದು ತೀರ್ಪು ಪ್ರಕಟಿಸಿತು. ಆರೋಪಿಗಳಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು. ತೀರ್ಪಿನ ಬಳಿಕ ಪ್ರಕರಣದ ಆರೋಪಿ ಉಣ್ಣಿಕೃಷ್ಣನ್ ತಲೆಮರೆಸಿಕೊಂಡಿದ್ದ.

ಆರೋಪಿಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ದಕ್ಷಿಣ ಠಾಣೆ ಪೊಲೀಸರು, ನಗರದ ಕೇಂದ್ರ ರೈಲು ನಿಲ್ದಾಣದಲ್ಲಿ ರೈಲಿನಿಂದ ಇಳಿಯುವ ಸಮಯದಲ್ಲಿ ಆರೋಪಿಯನ್ನು ಮಂಗಳೂರು ದಕ್ಷಿಣ ಠಾಣೆ ಅಧಿಕಾರಿ ಹಾಗೂ ಸಿಬ್ಬಂದಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News