ಜೀವನಶೈಲಿ ಸಂಬಂಧಿತ ಕಾಯಿಲೆಗಳ ನೆಪದಲ್ಲಿ ವಿಮಾ ಮೊತ್ತವನ್ನು ನಿರಾಕರಿಸುವಂತಿಲ್ಲ: ಎನ್‌ಸಿಆರ್‌ಡಿಸಿ

Update: 2018-10-13 17:34 GMT

ಹೊಸದಿಲ್ಲಿ,ಅ.13: ಜೀವನಶೈಲಿಯಿಂದಾಗಿ ಸಾಮಾನ್ಯವಾಗಿರುವ ಮಧುಮೇಹ ಮತ್ತು ರಕ್ತದೊತ್ತಡ ಮುಂತಾದ ಕಾಯಿಲೆಗಳ ನೆಪವೊಡ್ಡಿ ವಿಮಾ ಮೊತ್ತವನ್ನು ನೀಡಲು ನಿರಾಕರಿಸುವಂತಿಲ್ಲ ಎಂದು ತಿಳಿಸಿರುವ ಶ್ರೇಷ್ಟ ಗ್ರಾಹಕರ ಆಯೋಗ, ಮಧುಮೇಹ ರೋಗಿಯೊಬ್ಬರ ಕುಟುಂಬಕ್ಕೆ ಐದು ಲಕ್ಷ ರೂ. ವಿಮಾ ಮೊತ್ತವನ್ನು ಪಾವತಿಸುವಂತೆ ಭಾರತೀಯ ಜೀವ ವಿಮೆ ಸಂಸ್ಥೆ (ಎಲ್‌ಐಸಿ)ಗೆ ಸೂಚಿಸಿದೆ.

ಪಂಜಾಬ್ ಮೂಲದ ನೀಲಮ್ ಚೋಪ್ರಾಗೆ 45 ದಿನಗಳೊಳಗೆ ಐದು ಲಕ್ಷ ರೂ. ವಿಮಾ ಮೊತ್ತದ ಜೊತೆಗೆ 25,000ರೂ. ಪರಿಹಾರ ಮತ್ತು 5,000ರೂ. ಕಾನೂನು ವೆಚ್ಚವನ್ನು ನೀಡುವಂತೆ ರಾಷ್ಟ್ರೀಯ ಗ್ರಾಹಕ ಪರಿಹಾರ ಆಯೋಗ ಎಲ್‌ಐಸಿಯ ಪಂಜಾಬ್ ವಿಭಾಗಕ್ಕೆ ಸೂಚಿಸಿದೆ.

ನೀಲಮ್ ಚೋಪ್ರಾ ಅವರ ಪತಿ 2003ರಲ್ಲಿ ಎಲ್‌ಐಸಿಯಲ್ಲಿ ಜೀವ ವಿಮೆ ಮಾಡಿಸಿಕೊಂಡಿದ್ದರು. ಅವರು ಮಧುಮೇಹದಿಂದ ಬಳಲುತ್ತಿದ್ದರೂ ವಿಮೆ ಪಡೆಯುವ ವೇಳೆ ಈ ಬಗ್ಗೆ ತಿಳಿಸಿರಲಿಲ್ಲ. 2004ರಲ್ಲಿ ಅವರು ಹೃದಯಾಘಾತದಿಂದ ಮರಣ ಹೊಂದಿದ್ದರು. ಪತಿಯ ಮರಣದ ನಂತರ ನೀಲಮ್ ವಿಮಾ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದಾಗ, ರೋಗಿಯು ವಿಮೆಯನ್ನು ಪಡೆಯುವ ವೇಳೆ ತನ್ನ ರೋಗವನ್ನು ಮುಚ್ಚಿಟ್ಟಿದ್ದರು. ಹಾಗಾಗಿ ಅವರ ವಿಮಾ ಮೊತ್ತವನ್ನು ನೀಡಲು ಸಾಧ್ಯವಿಲ್ಲ ಎಂದು ಎಲ್‌ಐಸಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ನೀಲಮ್ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗ, ನೀಲಮ್ ಪತಿಯು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ ಈ ಸಮಸ್ಯೆ ಮರಣದ ಐದು ತಿಂಗಳು ಮೊದಲಿನಿಂದ ಇತ್ತು. ವಿಮೆಯನ್ನು ಪಡೆದುಕೊಳ್ಳುವ ಸಮಯದಲ್ಲಿ ಅವರಿಗೆ ಈ ಸಮಸ್ಯೆ ಇರಲಿಲ್ಲ. ಅವರು ಮಧುಮೇಹದಿಂದ ಬಳಲುತ್ತಿದ್ದರೂ ಅದು ನಿಯಂತ್ರಣದಲ್ಲಿತ್ತು. ಮುಖ್ಯವಾಗಿ, ಮಧುಮೇಹದಂಥ ಜೀವನಶೈಲಿ ಕಾಯಿಲೆಯನ್ನು ವಿಮೆ ಪಡೆಯುವ ವೇಳೆ ಮುಚ್ಚಿಟ್ಟರೆ ಅದರಿಂದ ಮೃತರ ಕುಟುಂಬವು ವಿಮಾ ಮೊತ್ತ ಪಡೆಯಲು ಸಂಪೂರ್ಣವಾಗಿ ಅನರ್ಹವಾಗುವುದಿಲ್ಲ ಎಂದು ಆಯೋಗ ತಿಳಿಸಿದೆ.

ಆದರೆ ಈ ಅಂಶ ವಿಮಾದಾರನು ತನ್ನ ರೋಗವನ್ನು ಮರೆಮಾಚಲು ಅನುಮತಿ ನೀಡಿದೆ ಎಂದು ಯಾರೂ ಭಾವಿಸಬಾರದು. ಹೀಗೆ ಮರೆಮಾಚುವುದರಿಂದ ವಿಮಾದಾರನ ಕುಟುಂಬ ಪಡೆಯುವ ವಿಮಾ ಮೊತ್ತದಲ್ಲಿ ಭಾರೀ ಕಡಿತವಾಗುತ್ತದೆ ಎಂದು ಆಯೋಗ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News