ದೇಶದ ಪರಂಪರೆ ಕಾಪಾಡಲು ಸರಕಾರ, ಕೋರ್ಟ್‌ಗೆ ಸಮಾನ ಜವಾಬ್ದಾರಿ ಇದೆ: ಜಿಫ್ರಿ ಮುತ್ತುಕೋಯ ತಂಙಳ್

Update: 2018-10-14 11:50 GMT

ಕೋಝಿಕ್ಕೋಡ್, ಅ.13: ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಂಸ್ಕೃತಿಕ ಔನತ್ಯವನ್ನು ಗೌರವಿಸುವ ಪರಂಪರೆ ದೇಶಕ್ಕಿದೆ. ಅದನ್ನು ಸಂರಕ್ಷಿಸಬೇಕಾದ್ದು ಸರಕಾರ ಮತ್ತು ಕೋರ್ಟಿನ ಸಮಾನ ಜವಾಬ್ದಾರಿಯಾಗಿದೆ ಎಂದು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅಭಿಪ್ರಾಯಪಟ್ಟಿದ್ದಾರೆ.

ಕೋಝಿಕ್ಕೋಡ್ ಮುದಲಕ್ಕುಳಂ ಮೈದಾನದಲ್ಲಿ ಶನಿವಾರ ನಡೆದ ಶರೀಅತ್ ಸಂರಕ್ಷಣಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಧಾರ್ಮಿಕತೆ ಮತ್ತು ನೈತಿಕತೆಯ ಉಳಿವಿಗಾಗಿ ಸರ್ವ ಧರ್ಮದ ನಾಯಕರೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಧರ್ಮಗಳಲ್ಲಿ ನಂಬಿಕೆ ಇಲ್ಲದ ಅಧಿಕಾರಿಗಳೂ ಕೂಡ ದೇಶದ ಪರಂಪರೆಯಾದ ಧಾರ್ಮಿಕ ಮೌಲ್ಯಗಳನ್ನು ಸಂರಕ್ಷಿಸಲು ಜವಾಬ್ದಾರರಾಗಿದ್ದಾರೆ. ತ್ರಿವಳಿ ತಲಾಕಿನ ಹೆಸರಿನಲ್ಲಿ ಕಟ್ಟುಕಥೆ ಕಟ್ಟಲಾಗಿದೆ. ತರಾತುರಿಯಲ್ಲಿ ಸುಗ್ರೀವಾಜ್ಞೆ ಜಾರಿಗೆ ತಂದ ರಾಷ್ಟ್ರಪತಿಯವರ ನಡೆಯು ದುರುದ್ದೇಶಪೂರಿತವಾಗಿದೆ. ಈ ಮೂಲಕ ಒಂದು ಪ್ರತ್ಯೇಕ ಸಮುದಾಯವನ್ನು ಎಲ್ಲ ರೀತಿಯಲ್ಲೂ ದಮನಿಸಿ ದೇಶದ ಉನ್ನತಿಯನ್ನು ಋಣಾತ್ಮಕತೆಡೆಗೆ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಹೇಳಿದರು.

ಸಂವಿಧಾನ ನೀಡಿದ ಹಕ್ಕುಗಳನ್ನು ಕೇಂದ್ರ ಸರಕಾರ ತಡೆಯಲು ಪ್ರಯತ್ನಿಸುತ್ತಿರುವುದು ಅಪಾಯಕಾರಿಯಾಗಿದ್ದು, ಪ್ರಸ್ತುತ ಬೆಳವಣಿಗೆಯು ಸಂವಿಧಾನ ವಿರೋಧಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಮಸ್ತದ ಪ್ರಧಾನ ಕಾರ್ಯದರ್ಶಿ ಶೈಖುಲ್ ಜಾಮಿಅಃ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್, ಸಮಸ್ತ ಉಪಾಧ್ಯಕ್ಷ ಎಂ.ಟಿ. ಅಬ್ದುಲ್ಲ ಮುಸ್ಲಿಯಾರ್, ಜಮಲುಲ್ಲೈಲಿ ತಂಙಳ್, ಅಬ್ಬಾಸಲಿ ಶಿಹಾಬ್ ತಂಙಳ್, ಸಯ್ಯದ್ ಸ್ವಾದಿಖಲೀ ಶಿಹಾಬ್ ತಂಙಳ್, ಸಂಸದ ಕುಂಞಾಲಿಕುಟ್ಟಿ, ನಾಸಿರ್ ಫೈಝಿ ಕೂಡತ್ತಾಯಿ, ಅಂಬಲಜಕ್ಕಡವ್ ಫೈಝಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News