'ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಅರಿವೇ ಇಲ್ಲದವರಿಗೆ ತಿರುಗೇಟು ನೀಡುವ ಅವಶ್ಯಕತೆ ಇಲ್ಲ'

Update: 2018-10-14 12:13 GMT

ಬಂಟ್ವಾಳ, ಅ. 15: ಸ್ಮಾರ್ಟ್‍ಸಿಟಿ ಯೋಜನೆಯ ಬಗ್ಗೆ ಯಾವುದೇ ಅರಿವು ಇಲ್ಲದೆ ಕೆಲ ಮಂದಿ ಸಚಿವ ಯು.ಟಿ. ಖಾದರ್ ವಿರುದ್ಧ ಆರೋಪ ಹೊರಿಸಿ ಪ್ರತಿಭಟನೆ ಕೈಗೊಳ್ಳುವ ಮೂಲಕ ಜನರನ್ನು ಹಾದಿ ತಪ್ಪಿಸುವ ಪ್ರಯತ್ನ ನಡೆಸಿದ್ದು, ಇದು ಅವರ ಅರಿವಿನ ಕೊರೆತಯನ್ನು ಎತ್ತಿ ತೋರಿಸುತ್ತದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಶೀರ್ ಪೇರಿಮಾರ್ ಅಣಕವಾಡಿದ್ದಾರೆ.

ಮಂಗಳೂರಿನಲ್ಲಿ ಸಚಿವ ಖಾದರ್ ವಿರುದ್ಧ ಸ್ಮಾರ್ಟ್‍ಸಿಟಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಸ್ಮಾರ್ಟ್ ಸಿಟಿ ಎಂದರೇನು? ಇದರಲ್ಲಿ ಯಾವ ಯೋಜನೆಗಳೆಲ್ಲಾ ಒಳಗೊಂಡಿದೆ ಎಂಬ ಬಗ್ಗೆ ಕಿಂಚಿತ್ತೂ ಅರಿವಿಲ್ಲದೆ ಪ್ರತಿಭಟನೆ, ಪತ್ರಿಕಾ ಹೇಳಿಕೆ, ಮಾಧ್ಯಮ ಚರ್ಚೆ ನಡೆಸುವ ಮಂದಿಯ ವಿರುದ್ಧ ತಿರುಗೇಟು ನೀಡಿ ನಿಜಕ್ಕೂ ಹೀರೋಗಳಾಗುವ ಅವಶ್ಯಕತೆ ಇಲ್ಲವೆಂದು ಹೇಳಿದರು.

ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೆ ತಂದ ಸರಕಾರ ಯಾವುದು ?, ನಮ್ಮ ಜಿಲ್ಲೆಗೆ ಸ್ಮಾರ್ಟ್ ಸಿಟಿ ಆಯ್ಕೆ ಮಾಡಿದವರು ಯಾರು ?, ಸ್ಮಾರ್ಟ್ ಸಿಟಿ ಕಮಿಟಿಯಲ್ಲಿ ಯಾರಿದ್ದಾರೆ ?, ಈ ಯೋಜನೆಯಲ್ಲಿ ದೇಶದ ಎಷ್ಟು ಕಸಾಯಿಖಾನೆಗೆ ಹಣ ಮೀಸಲಿಡಲಾಗಿದೆ ?, ಈ ಎಲ್ಲ ಮಾಹಿತಿಗಳು ಈ ಪ್ರತಿಭಟನೆ ನಡೆಸುವವರಿಗೆ ತಿಳಿಯದೇ ಇರುವುದು ಇವರ ನೈತಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅವರು ತನ್ನ ರಾಜಕೀಯ ಜೀವನದುದ್ದಕ್ಕೂ ಯಾವುದೇ ಧರ್ಮ-ಜಾತಿಯ ಹೆಸರಿನಲ್ಲಿ ರಾಜಕೀಯ ನಡೆಸದೆ ಜನರ ಹಾಗೂ ಕ್ಷೇತ್ರದ ಅಭ್ಯುದಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಸಮಾಜದ ಎಲ್ಲ ಧರ್ಮಗಳನ್ನೂ ಗೌರವಿಸುತ್ತಾ ತಮ್ಮತನವನ್ನು ಸಾಬೀತುಪಡಿಸಿದ್ದಾರೆ. ಇಂತಹ ಮಹಾನ್ ರಾಜಕಾರಣಿಯ ಬಗ್ಗೆ ಮಾತನಾಡುವ ನೈತಿಕತೆ ಇವರಾರಿಗೂ ಬಂದಿಲ್ಲ. ಸಚಿವರ ವಿರುದ್ಧ ವಿನಾ ಆರೋಪ ಹೊರಿಸಿರುವ ಪ್ರತಿಭಟನಕಾರರ ಕ್ರಮವನ್ನು ಯುವ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News