ಜನಸಾಮಾನ್ಯರ ಬದುಕನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು: ಜಾಕೆ ಮಾಧವ ಗೌಡ

Update: 2018-10-14 12:21 GMT

ಪುತ್ತೂರು, ಅ. 14: ಜನಸಾಮಾನ್ಯರ ಬದುಕನ್ನು ಅರ್ಥ ಮಾಡಿಕೊಂಡು ಅಭಿವೃದ್ಧಿ ಯೋಜನೆಗಳನ್ನು ರೂಪಿಸಬೇಕು. ಕೇವಲ ಯೋಜನೆಗಳಿಗಾಗಿ ಯೋಜನೆ ಸೃಷ್ಟಿ ಮಾಡುವುದಲ್ಲ. ಜನಸಾಮಾನ್ಯರ ಸಮಸ್ಯೆಗಳನ್ನು ತಿಳಿದುಕೊಂಡು ಸಾಮಾಜಿಕ ನ್ಯಾಯ ನೀಡುವ ಕೆಲಸ ಜಾತ್ಯಾತೀತ ಜನತಾದಳ ದಿಂದ ಮಾತ್ರ ಸಾಧ್ಯ ಎಂದು ಜೆಡಿಎಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜಾಕೆ ಮಾಧವ ಗೌಡ ಹೇಳಿದರು. 

ಅವರು ಪುತ್ತೂರು ದರ್ಬೆಯ ಬುಶ್ರಾ ಟವರ್ ನಲ್ಲಿರುವ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ರವಿವಾರ ಜೆಡಿಎಸ್ ಕಾರ್ಮಿಕ ಘಟಕ ಉದ್ಘಾಟಿಸಿ ಮಾತನಾಡಿದರು.

ಅಧಿಕಾರ ಯಾರಿಗೂ ಶಾಶ್ವತವಲ್ಲ. ಪ್ರಧಾನಿ ನರೇಂದ್ರ ಮೋದಿ ಬಿಟ್ಟರೆ ಬೇರೆ ಯಾರಿಂದಲೂ ದೇಶ ಕಟ್ಟುವ ಕೆಲಸ ಸಾಧ್ಯವಿಲ್ಲ ಎಂದು ಭಾವಿಸಬೇಕಾಗಿಲ್ಲ. ಈ ಹಿಂದೆಯೂ ದೇಶ ಕಟ್ಟುವ ಮಂದಿ ಇದ್ದರು. ಮುಂದೆಯೂ ಬರುತ್ತಾರೆ. ಇಂದು ರಾಜಕೀಯ ಪೈಪೋಟಿ ಇದೆ. ಹೆಚ್ಚು ಪ್ರಚಾರ ಮಾಡುವವರು ಗೆದ್ದು ಅಧಿಕಾರ ಪಡೆಯುತ್ತಾರೆ. ಯಾವುದೇ ಅಧಿಕಾರ ಒಬ್ಬರಿಗೆ ಮೀಸಲಾಗಿಲ್ಲ. ಬದಲಾವಣೆ ನಿರಂತರ ಎಂದ ಅವರು ಗ್ರಾಮೀಣ ಭಾಗದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸುವ ಮೂಲಕ ಜೆಡಿಎಸ್ ಗೆ ಗೌರವ ತಂದುಕೊಡಲು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮುಂದಾಗಬೇಕಾಗಿದೆ ಎಂದು ಹೇಳಿದರು.

ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಎಸ್ ಹೆಗ್ಡೆ, ಹಿಂದುಳಿದ ವರ್ಗಗಳ ಅಧ್ಯಕ್ಷ ಹರೀಶ್ ಕೊಟ್ಟಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್‍ಚಂದ್ರ ಜೈನ್ ,ಜೆಡಿಎಸ್ ರಾಜ್ಯ ಸಮಿತಿಯ ಜಂಟಿ ಕಾರ್ಯದರ್ಶಿ ಇಬ್ರಾಹಿಂ ಗೋಳಿಕಟ್ಟೆ, ಪುತ್ತೂರು ತಾಲೂಕು ಜೆಡಿಎಸ್ ಅಧ್ಯಕ್ಷ ಅಶ್ರಫ್ ಕಲ್ಲೇಗ, ಮಾಜಿ ಅಧ್ಯಕ್ಷ ಐ.ಸಿ.ಕೈಲಾಸ್, ಪುತ್ತೂರು ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ ಮಣಿಯನ್, ಯುವ ಜೆಡಿಎಸ್ ಅಧ್ಯಕ್ಷ ಶಿವು ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಕಾರ್ಮಿಕ ಘಟಕದ ಅಧ್ಯಕ್ಷ ಮಹಾವೀರ ಜೈನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News