ಮಂಗಳೂರು ನಗರವು ಬೆಂಗಳೂರಿಗೆ ಸಮಾನವಾಗಿ ನಿಲ್ಲಲು ಸಹಕಾರ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2018-10-14 15:42 GMT

ಮಂಗಳೂರು, ಅ.14: ಮಂಗಳೂರು ಶಿಕ್ಷಣ, ಆರೋಗ್ಯ, ಕೈಗಾರಿಕೆ ಸಹಿತ ಎಲ್ಲಾ ಕ್ಷೇತ್ರದಲ್ಲೂ ಮುಂದಿದೆ. ಆದರೆ, ಕೆಲವು ಸಮಾಜ ಘಾತುಕ ಶಕ್ತಿಗಳಿಂದಾಗಿ ಮಂಗಳೂರಿಗೆ ಹೊರಭಾಗದಲ್ಲಿ ಕೆಟ್ಟ ಹೆಸರು ಬರುತ್ತಿದೆ. ಇದನ್ನು ತೊಡೆದು ಹಾಕುವ ಸಲುವಾಗಿ ದ.ಕ.ಜಿಲ್ಲಾ ಪತ್ರಕರ್ತರ ಸಂಘವು ‘ಬ್ರಾಂಡ್ ಮಂಗಳೂರು’ ಯೋಜನೆಯನ್ನು ಹಮ್ಮಿಕೊಂಡಿರುವುದು ಸ್ತುತ್ಯಾರ್ಹ. ಮಂಗಳೂರು ನಗರವು ಬೆಂಗಳೂರಿಗೆ ಸಮಾನವಾಗಿ ನಿಲ್ಲಬೇಕು ಎಂಬುದು ನನ್ನ ಕನಸಾಗಿದೆ. ಇದನ್ನು ನನಸಾಗಿಸಲು ಪತ್ರಕರ್ತರ ಸಂಘ ಮುಂದಾಗಿರುವುದು ಶ್ಲಾಘನೀಯ. ಸಂಘದ ಈ ಯೋಜನೆ ಸಾಕಾರಗೊಳ್ಳಲು ಸಮ್ಮಿಶ್ರ ಸರಕಾರವು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಮಂಗಳೂರು ಹಾಗೂ ಪತ್ರಿಕಾ ಭವನ ಟ್ರಸ್ಟ್‌ನಿಂದ ಆಯೋಜಿಸಲಾದ ‘ಬ್ರಾಂಡ್ ಮಂಗಳೂರು’ ಮತ್ತು ‘ಪತ್ರಕರ್ತರ ಗ್ರಾಮ ವಾಸ್ತವ್ಯ’ ಯೋಜನೆಗೆ ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನಲ್ ಸೆಂಟರ್‌ನಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಮಟ್ಟದ ಪತ್ರಕರ್ತರ ಸಂಘದ ಈ ಯೋಜನೆಯು ನಾಡಿಗೆ ಮಾದರಿಯಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಇಲ್ಲೇ ವಿಫುಲ ಅವಕಾಶಗಳಿವೆ. ಅದನ್ನು ಸದುಪಯೋಗಪಡಿಸಲು ಮನಸ್ಸು ಮುಖ್ಯವಾಗಿದೆ. ಚುನಾವಣೆ ಸಂದರ್ಭ ರಾಜಕೀಯ ಮಾಡುವುದು ಸಹಜ. ಆದರೆ ಚುನಾವಣೆಯ ಬಳಿಕ ರಾಜಕೀಯ ಮರೆತು ಅಭಿವೃದ್ಧಿಗೆ ಕೈ ಜೋಡಿಸಬೇಕು. ದ.ಕ. ಜಿಲ್ಲೆಯ ಜನರು ಹೊರ ಜಿಲ್ಲೆ, ಹೊರ ರಾಜ್ಯ, ವಿದೇಶಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡುತ್ತಿದ್ದಾರೆ. ಆದರೆ ಮಂಗಳೂರಲ್ಲೇ ಆ ಸಾಧನೆ ಮಾಡಲು ಇರುವ ತೊಡಕುಗಳು ಏನು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಅಲ್ಲದೆ, ಸಮಾಜವನ್ನು ವಿಭಜಿಸುವ ಶಕ್ತಿಗಳಿಗೆ ಮಣೆ ಹಾಕದೆ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ನುಡಿದರು.

ಖಜಾನೆ ಖಾಲಿಯಾಗಿಲ್ಲ

ರೈತರ 45 ಸಾವಿರ ಕೋ.ರೂ. ಸಾಲ ಮನ್ನಾ ಮಾಡಿದ್ದರಿಂದ ರಾಜ್ಯ ಸರಕಾರದ ಖಜಾನೆ ಖಾಲಿಯಾಗಿದೆ ಎಂಬ ಭಾವನೆ ಎಲ್ಲರಲ್ಲೂ ಇದೆ. ಆದರೆ ಸರಕಾರದ ಖಜಾನೆ ಖಾಲಿಯಾಗಿಲ್ಲ. ಈಗಲೂ 10 ಸಾವಿರ ಕೋ.ರೂ.ಖಜಾನೆಯಲ್ಲಿದೆ ಎಂದ ಮುಖ್ಯಮಂತ್ರಿ ಕುಮಾರಸ್ವಾಮಿ, ಸರಕಾರ ಇಂದು ಬೀಳುತ್ತೆ, ನಾಳೆ ಬೀಳುತ್ತೆ ಎಂದು ಬಿಜೆಪಿ ಹಗಲು ಕನಸು ಕಾಣುತ್ತಿದೆ. ಅದಕ್ಕೆ ಕೆಲವು ಮಾಧ್ಯಮಗಳೂ ಕೂಡಾ ಪ್ರಚಾರ ನೀಡುತ್ತಿವೆ. ಆದರೆ ರಾಜ್ಯ ಸರಕಾರ ಸುಭದ್ರವಾಗಿದ್ದು, ಸರಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ನನ್ನ ವೇಗಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ

ಅಭಿವೃದ್ಧಿಯ ವಿಷಯದಲ್ಲಿ ನಾನು ತುಂಬಾ ವೇಗ ಹೊಂದಿದ್ದೇನೆ. ಆದರೆ ಬಿಜೆಪಿಗರು ಮಾಡುವ ಅಪಪ್ರಚಾರವನ್ನು ಅಧಿಕಾರಿಗಳು ನಂಬಿ ಕೂತಿದ್ದು, ನನ್ನ ವೇಗಕ್ಕೆ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಗೆ ಧಕ್ಕೆ ತರುವುದಿಲ್ಲ

ನಾಡಿನ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಾಗಿದೆ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಗೆ ಧಕ್ಕೆ ತರುವ ಕೆಲಸವನ್ನು ಯಾವತ್ತೂ ಮಾಡುವುದಿಲ್ಲ ಎಂದ ಕುಮಾರಸ್ವಾಮಿ, ದ.ಕ.ಜಿಲ್ಲೆಯ ಅಭಿವೃದ್ಧಿಗೆ ನಾನು ಎಂದೂ ಹಿಂದೇಟು ಹಾಕಿಲ್ಲ. ಉಳ್ಳಾಲ ನಗರದ ಕುಡಿಯುವ ನೀರಿನ ಯೋಜನೆಗೆ 198 ಕೋ.ರೂ. ಮಂಜೂರು ಮಾಡಿರುವುದೇ ಅದಕ್ಕೆ ಸಾಕ್ಷಿಯಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ರೂಪುರೇಷ ಸಿದ್ಧಪಡಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.

ಅ.17ರಂದು ಕೊಡವ ಪ್ರವಾಸ

ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿಗೆ ಅ.17ರಂದು ಪ್ರವಾಸಕೈಗೊಳ್ಳಲಿದ್ದೇನೆ. ಅಲ್ಲೇ ಒಂದಿಡೀ ದಿನ ಜನರ ಅಹವಾಲು ಆಲಿಸಲಿದ್ದೇನೆ. ಕೇಂದ್ರ ಸರಕಾರದ ಎಲ್ಲಾ ಮಾರ್ಗಸೂಚಿಗಳನ್ನು ಬದಿಗಿಟ್ಟು ಸಂತ್ರಸ್ತರ ಕಣ್ಣೀರೊರೆಸುವ ಕೆಲಸ ಕಾರ್ಯಗಳನ್ನು ಮಾಡಲಿದ್ದೇನೆ ಎಂದು ಕುಮಾರಸ್ವಾಮಿ ನುಡಿದರು.

ಬೇಡಿಕೆ ಈಡೇರಿಸುವೆ

ಪತ್ರಕರ್ತರ ಬದುಕಿನ ಚಿತ್ರಣ ನನ್ನ ಕಣ್ಣಮುಂದಿದೆ. ಜನರ ಸಮಸ್ಯೆಗಳ ಬೆಳಕು ಚೆಲ್ಲುವ ಪತ್ರಕರ್ತರ ಸಂಕಷ್ಟಮಯ ಬದುಕಿಗೆ ಆಸರೆ ನೀಡುವ ಸಲುವಾಗಿ ಸಂಘ ಮುಂದಿಟ್ಟ ವಿವಿಧ ಬೇಡಿಕೆಗಳನ್ನು ಈಡೇರಿಸಲು ಶೀಘ್ರ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ ಇಂದಾಜೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಎಸ್.ಎಲ್. ಧರ್ಮೇಗೌಡ, ಬಿ.ಎಂ.ಫಾರೂಕ್, ಐವನ್ ಡಿಸೋಜ, ಹರೀಶ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಕೆ., ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಯೋಗೀಶ್ ಭಟ್, ದ.ಕ. ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಹೊಟೇಲ್ ಓಶಿಯನ್ ಪರ್ಲ್ ಉಪಾಧ್ಯಕ್ಷ ಬಿ.ಎನ್. ಗಿರೀಶ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಆನಂದ ಶೆಟ್ಟಿ, ಪತ್ರಕರ್ತ ಪುಷ್ಪರಾಜ್ ಬಿ.ಎನ್., ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಉಪಸ್ಥಿತರಿದ್ದರು.

ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡಸ್ಥಳ ಸ್ವಾಗತಿಸಿದರು. ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಮಾಜಿ ಅಧ್ಯಕ್ಷ ಪಿ.ಬಿ.ಹರೀಶ್ ರೈ ಕಾರ್ಯಕ್ರಮ ನಿರೂಪಿಸಿದರು. 

ಕಾರ್ಯಕ್ರಮದಲ್ಲಿ ‘ಬ್ರಾಂಡ್ ಮಂಗಳೂರು’ ಯೋಜನೆಯ ಲಾಂಛನ ಅನಾವರಣಗೊಳಿಸಲಾಯಿತು. ಕೊಡಗು ಸಂತ್ರಸ್ತರಿಗಾಗಿ ಮುಖ್ಯಮಂತ್ರಿಯ ಪರಿಹಾರ ನಿಧಿಗೆ 51 ಸಾವಿರ ರೂ. ಮೊತ್ತದ ಚೆಕ್ ಹಸ್ತಾಂತರಿಸಲಾಯಿತು. ಪತ್ರಕರ್ತರ ವಿವಿಧ ಬೇಡಿಕೆಗಳ ಮನವಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News