ವಿದೇಶಿ ಉದ್ಯೋಗ: ಕರಾವಳಿ ಜಿಲ್ಲೆಯಲ್ಲಿ ಅಧಿಕೃತ ಏಜೆಂಟ್‌ಗಳೇ ಇಲ್ಲ- ಡಾ.ರವೀಂದ್ರನಾಥ ಶಾನುಭಾಗ್

Update: 2018-10-14 13:44 GMT

ಉಡುಪಿ, ಅ.14: ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ವಿದೇಶದಲ್ಲಿ ಉದ್ಯೋಗ ಒದಗಿಸುವ ನೋಂದಾಯಿತ ಏಜೆಂಟ್ ಗಳ ಪಟ್ಟಿಯಲ್ಲಿ ದ.ಕ. ಹಾಗೂ ಉಡುಪಿ ಜಿಲ್ಲೆಯ ಯಾವುದೇ ಏಜೆಂಟ್‌ಗಳ ಹೆಸರುಗಳಿಲ್ಲ. ಆದುದರಿಂದ ಇಲ್ಲಿನ ಅನಧಿಕೃತ ಏಜೆಂಟ್‌ಗಳ ಮೂಲಕ ಹೊರ ದೇಶಗಳಿಗೆ ಉದ್ಯೋಗಕ್ಕೆ ಹೋಗುವವರು ಮೋಸ ಹೋಗುವ ಬಗ್ಗೆ ಎಚ್ಚರ ವಹಿಸಬೇಕು ಎಂದು ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ತಿಳಿಸಿದ್ದಾರೆ.

ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ನೀತಿ ಹಾಗೂ ಶಾಂತಿ ಆಯೋಗದ ಸಹಯೋಗದಲ್ಲಿ ರವಿವಾರ ಉಡುಪಿ ಕಥೋಲಿಕ್ ಸಭಾ ಕೇಂದ್ರೀಯ ಕಚೇರಿಯ ಸಭಾಭವನದಲ್ಲಿ ಆಯೋಜಿಸಲಾದ ವಿದೇಶಗಳಿಗೆ ದುಡಿಯಲು ತೆರಳುವ ಜನರು ವಿದೇಶದಲ್ಲಿ ಎದುರಿಸಬಹುದಾದ ಸಮಸ್ಯೆಗಳು ಹಾಗೂ ಅದರ ಪರಿಹಾರ ಮತ್ತು ನೆರವು ಕುರಿತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತಿದ್ದರು.

ವಿದೇಶಾಂಗ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕಳೆದ ಐದು ವರ್ಷಗಳಿಂದ ನೋಂದಾಯಿತ ಏಜೆಂಟ್‌ಗಳ ಹೆಸರುಗಳನ್ನು ಪ್ರಕಟಿಸಲಾಗುತ್ತಿದೆ. ದೇಶದ ಕಾನೂನಿನ ಪ್ರಕಾರ ಈ ಏಜೆಂಟ್‌ಗಳಿಗೆ ಸಬ್ ಏಜೆಂಟ್‌ಗಳು ಎಂಬುದಿಲ್ಲ. ನಮ್ಮಲ್ಲಿ ಸಬ್‌ ಏಜೆಂಟ್‌ಗಳೆಂದು ಹೇಳಿಕೊಳ್ಳುವವರೆಲ್ಲ ಮೋಸಗಾರರೇ ಆಗಿ ದ್ದಾರೆ. ಸರಕಾರ ಇಷ್ಟೆಲ್ಲ ಎಚ್ಚರಿಸುತ್ತಿದ್ದರೂ ಜನ ಮಾತ್ರ ಮೋಸ ಹೋಗುತ್ತಲೇ ಇದ್ದಾರೆ ಎಂದರು.

ಕೊಲ್ಲಿ ರಾಷ್ಟ್ರಗಳಿಗೆ ಉದ್ಯೋಗಕ್ಕೆ ತೆರಳುವ ಶೇ.98ರಷ್ಟು ಮಂದಿಗೆ ಯಾವುದೇ ಸಮಸ್ಯೆ ಇರಲ್ಲ. ಶೇ.2ರಷ್ಟು ಮಂದಿ ಮಾತ್ರ ಕೆಲವೊಂದು ಸಮಸ್ಯೆಗಳಲ್ಲಿ ಸಿಲುಕಿ ಕೊಳ್ಳುತ್ತಾರೆ. ಇವರೆಲ್ಲರೂ ಏಜೆಂಟ್‌ಗಳ ಮೂಲಕ ಕೆಲಸಕ್ಕೆ ಹೋಗಿರುವವರಾಗಿದ್ದಾರೆ. ಇದರಲ್ಲಿ ಮಹಿಳೆಯರೇ ಹೆಚ್ಚು ಎಂದು ಅವರು ಹೇಳಿದರು.

ವಿದೇಶದಲ್ಲಿ ಉದ್ಯೋಗ ಒದಗಿಸುವುದಾಗಿ ಹೇಳಿ ಮಾನವ ಕಳ್ಳ ಸಾಗಾಟ ಮಾಡುವ ಏಳೆಂಟು ಏಜೆಂಟರು ಮುಂಬೈಯಲ್ಲಿ ಇದ್ದಾರೆ. ಇವರ ಬಗ್ಗೆ ಕೇಂದ್ರ ಸರಕಾರಕ್ಕೆ ಪತ್ರ ಬರೆದರೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಏಜೆಂಟ್ ಗಳು ಉದ್ಯೋಗದ ಆಮಿಷವೊಡ್ಡಿ ಮಹಿಳೆಯರನ್ನು ನೇಪಾಳಕ್ಕೆ ಕಳುಹಿಸಿ ಅಲ್ಲಿಂದ ದುಬೈಗೆ ರವಾನಿಸುತ್ತಾರೆ. ಅಲ್ಲಿ ಬೇರೆ ಬೇರೆ ದೇಶಗಳ ಅರಬ್‌ಗಳು ಬಂದು ಇವರನ್ನು ಹಣ ಕೊಟ್ಟು ಖರೀದಿಸುತ್ತಾರೆ. ಇದಕ್ಕೆ ಕಾರ್ಕಳದ ಜೆಸ್ಸಿಂತಾ ಜೀವಂತ ಸಾಕ್ಷಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲು ಆಯಾ ಜಾತಿ, ಧರ್ಮಗಳ ಸಂಘಟನೆಗಳು ಮುಂದೆ ಬರಬೇಕು. ಆ ಮೂಲಕ ವಿದೇಶಕ್ಕೆ ತೆರಳುವ ತಮ್ಮ ಸಮುದಾಯದವರನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಕೆಥೋಲಿಕ್ ಸಭಾದ ನಿಕಟಪೂರ್ವ ಅಧ್ಯಕ್ಷ ವಲೇರಿಯನ್ ಫೆರ್ನಾಂಡಿಸ್, ನಿಯೋಜಿತ ಅಧ್ಯಕ್ಷೆ ಮೇರಿ ಡಿಸೋಜ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್ ಉಪಸ್ಥಿತರಿದ್ದರು.

ಕೆಥೋಲಿಕ್ ಸಭಾ ಅಧ್ಯಕ್ಷ ಅಲ್ವಿನ್ ಕ್ವಾರ್ಡಸ್ ಸ್ವಾಗತಿಸಿದರು. ಅಲ್ಫೋನ್ ಡಿಕೋಸ್ತ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಮ್ಯಾಕ್ಸಿಮ್ ಡಿಸೋಜ ವಂದಿಸಿದರು. ಫ್ಲೆವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News