ಕಡಿಯಾಳಿ: ಬೀದಿನಾಯಿ ಮರಿಗಳ ದತ್ತು ಸ್ವೀಕಾರ
ಉಡುಪಿ, ಅ.14: ಉಡುಪಿ ರೋಟರಿ ಕ್ಲಬ್ ವತಿಯಿಂದ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮತ್ತು ನೆಫ್ಸಾ ಅನಿಮಲ್ ಕೇರಿಂಗ್ ಸಹಭಾಗಿತ್ವದಲ್ಲಿ ಬೀದಿ ನಾಯಿ ಮರಿಗಳ ದತ್ತು ಸ್ವೀಕಾರ ಕಾರ್ಯಕ್ರಮವನ್ನು ರವಿವಾರ ಕಡಿ ಯಾಳಿ ಪ್ರಾಥಮಿಕ ಶಾಲೆಯ ರೋಟರಿ ಭವನದಲ್ಲಿ ಆಯೋಜಿಸಲಾಗಿತ್ತು.
ಬೀದಿಯಲ್ಲಿ ತಿರುಗಾಡುತ್ತಿದ್ದ ಹಾಗೂ ಎಸೆಯಲ್ಪಟ್ಟ ನಾಯಿಮರಿಗಳನ್ನು ರಕ್ಷಿಸಿ ಆಸಕ್ತರಿಗೆ ದತ್ತು ನೀಡುವ ಈ ಕಾರ್ಯಕ್ರಮದಲ್ಲಿ 25 ನಾಯಿಮರಿಗಳನ್ನು ಇರಿಸಲಾಗಿತ್ತು. ಸುಮಾರು 7 ಮರಿಗಳನ್ನು ಆಸಕ್ತರು ದತ್ತು ಸ್ವೀಕರಿಸಿದರು. ಎಲ್ಲವೂ ಮೂರು ತಿಂಗಳ ಒಳಗಿನ ಮರಿಗಳಾಗಿವೆ. ವಿವಿಧ ಬಣ್ಣಗಳ ಮುದ್ದು ಮುದ್ದಾದ ನಾಯಿ ಮರಿಗಳು ಎಲ್ಲರ ಗಮನ ಸೆಳೆದವು.
‘ಮಲ್ಪೆ ಮತ್ತು ಮಣಿಪಾಲದಲ್ಲಿ ಈಗಾಗಲೆ ಈ ರೀತಿಯ ಎರಡು ಕಾರ್ಯ ಕ್ರಮಗಳನ್ನು ಮಾಡಲಾಗಿದೆ. ಅದರಲ್ಲಿ 60ಕ್ಕೂ ಹೆಚ್ಚು ಬೀದಿ ನಾಯಿ ಮರಿ ಗಳನ್ನು ದತ್ತು ನೀಡಲಾಗಿದೆ. ಮರಿಗಳನ್ನು ನೀಡುವಾಗ ಅದರ ಆರೋಗ್ಯ ಕಾಳಜಿ, ಆಹಾರದ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ಮರಿ ದತ್ತು ಪಡೆದು ಕೊಂಡವರು ತಿಂಗಳಿಗೊಮ್ಮೆ ಟ್ರಸ್ಟ್‌ನ ವಾಟ್ಸಾಪ್‌ಗೆ ನಾಯಿಯ ಬಗ್ಗೆ ಮಾಹಿತಿ ನೀಡುತ್ತಿರಬೇಕು ಎಂದು ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮತ್ತು ನೆಫ್ಸಾ ಕೇರಿಂಗ್‌ನ ಬಬಿತ ಮಧ್ವರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಪಶು ವೈದ್ಯ ಡಾ.ಪ್ರಶಾಂತ್ ಶೆಟ್ಟಿ ಬೀದಿ ನಾಯಿ ಮರಿಗಳ ಆರೋಗ್ಯ, ಪಾಲನೆ, ಪೋಷಣೆ ಕುರಿತು ಉಪನ್ಯಾಸ ನೀಡಿದರು. ಉಡುಪಿ ರೋಟರಿ ಕ್ಲಬ್‌ನ ಎ.ಎಸ್.ಚಂದ್ರಶೇಖರ್, ಜನಾರ್ದನ್ ಭಟ್, ತೃಪ್ತಿ ಪೈ ಮೊದಲಾದವರು ಉಪಸ್ಥಿತರಿದ್ದರು.