ಸುಬ್ರಹ್ಮಣ್ಯ ದೇವಳ, ಮಠದ ನಡುವಿನ ಭಿನ್ನಾಭಿಪ್ರಾಯ ಶಮಕ್ಕೆ ಯತ್ನ: ಪೇಜಾವರ ಶ್ರೀ

Update: 2018-10-14 15:29 GMT

ಉಡುಪಿ, ಅ.14: ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಮಠದವರು ಯಾವುದೇ ಘರ್ಷಣೆಗೆ ಅವಕಾಶ ಕೊಡದೆ ಪರಸ್ಪರ ಸಾಮರಸ್ಯದಿಂದ ಇರಬೇಕು. ದೇವ ಸ್ಥಾನಕ್ಕೆ ನಮ್ಮ ಯಾವುದೇ ವಿರೋಧ ಇಲ್ಲ. ಇಲ್ಲಿನ ಭಿನ್ನಾಭಿಪ್ರಾಯ ಹಾಗೂ ಸಮಸ್ಯೆ ಪರಿಹಾರಕ್ಕೆ ಸುಬ್ರಹ್ಮಣ್ಯ ಸ್ವಾಮೀಜಿ ಸಹಕಾರ ಕೊಡಲು ಸಿದ್ಧರಿದ್ದು, ಅದೇ ರೀತಿ ದೇವಸ್ಥಾನದವರು ಕೂಡ ಸಹಕಾರ ನೀಡಬೇಕು ಎಂದು ಪೇಜಾವರ ಶ್ರೀವಿಶೆ್ವೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಕೃಷ್ಣ ಮಠದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ವಿರೋಧಿಗಳ ಅನಾವಶ್ಯಕ ಕಿರುಕುಳ ದಿಂದ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮನ ನೊಂದು ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದು, ಸಮಸ್ಯೆ ಬಗೆಹರಿಯದೆ ಉಪವಾಸ ಕೊನೆಗೊಳಿಸುವುದಿಲ್ಲ ಎಂದು ಹೇಳಿಕೆ ಕೊಟ್ಟಿರುುದು ಕಳವಕಾರಿ ಯಾಗಿದೆ. ಎಂದರು.

ಸುಬ್ರಹ್ಮಣ್ಯ ಮಠ ಅಥವಾ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ಮಾಡಲು ಜನರಿಗೆ ಸ್ವಾತಂತ್ರ ಇದೆ. ಆದರೂ ಮಠದಲ್ಲಿ ಸಂಸ್ಕಾರ ಮಾಡುವುದಕ್ಕೆ ನಿರ್ಬಂಧ ಹೇರಿ, ಅಪಪ್ರಚಾರ ನಡೆಸಲಾಗುತ್ತಿದೆ. ಈ ಮೂಲಕ ಸ್ವಾಮೀಜಿಗೆ ಅನಾವಶ್ಯಕ ಕಿರುಕುಳ ನೀಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಮಾಡು ತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಅಷ್ಟಮಠಾಧೀಶರ ಬೆಂಬಲ ಇದೆ ಎಂದು ಅವರು ತಿಳಿಸಿದರು.

ಮಠದಿಂದ ಪ್ರತ್ಯೇಕವಾಗಿ ಸರ್ಪ ಸಂಸ್ಕಾರ ಮಾಡುವುದರಿಂದ ಸಮಾಜಕ್ಕೆ ಅನುಕೂಲವೇ ಹೊರತು ಯಾವುದೇ ತೊಂದರೆ, ಹಾನಿಯೂ ಇಲ್ಲ. ದೇವಸ್ಥಾನ ದಲ್ಲಿ ಮಾಡುವದಕ್ಕೆ ಯಾವುದೇ ನಿರ್ಬಂಧವಿಲ್ಲವೊ ಹಾಗೆಯೇ ಮಠದಲ್ಲಿ ಮಾಡುವುದಕ್ಕೆ ಅವಕಾಶ ಕಲ್ಪಿಸಬೇಕು. ಮಠದಲ್ಲಿ ನಡೆಸುವ ಸರ್ಪ ಸಂಸ್ಕಾರಕ್ಕೆ ವಿರೋಧ ಮಾಡುವುದನ್ನು ನಾವು ಬೆಂಬಲಿಸುವುದಿಲ್ಲ ಎಂದರು.

ನವರಾತ್ರಿ ಮುಗಿದ ಬಳಿಕ ನಾವೇ ಸ್ವತಃ ಸುಬ್ರಹ್ಮಣ್ಯಕ್ಕೆ ತೆರಳಿ ಭಿನ್ನಾಭಿಪ್ರಾಯ ಸರಿ ಪಡಿಸಲು ಪ್ರಯತ್ನ ಮಾಡಲಾಗುವುದು. ಅಲ್ಲಿಯವರೆಗೆ ಸ್ವಾಮೀಜಿ ಸತ್ಯಾಗ್ರಹ ಮುಂದುವರೆಸದೆ ಸ್ಥಗಿತಗೊಳಿಸಬೇಕು. ಸ್ವಾಮೀಜಿ ಉಪವಾಸ ನಿಲ್ಲಿಸಲು ದೇವಸ್ಥಾನದವರು ಸಂಪೂರ್ಣ ಸಹಕಾರ ನೀಡಬೇಕು. ಮಠದಿಂದ ದೇವಸ್ಥಾನ ಹಾಗೂ ಜನರಿಗೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸಲು ನಾವು ಪ್ರಯತ್ನ ಮಾಡುತ್ತೇವೆ. ಸಾಧ್ಯವಾದರೆ ಬೆಂಗಳೂರಿನಿಂದ ಅ.16ರಂದು ಒಂದು ದಿನದ ಮಟ್ಟಿಗೆ ಸುಬ್ರಹ್ಮಣ್ಯಕ್ಕೆ ಹೋಗಿ ಬರಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದರು.

ಸರಕಾರ ಪ್ರವೇಶದಿಂದ ಈ ಎಲ್ಲ ಸಮಸ್ಯೆ ಸೃಷ್ಠಿಯಾಗಿದೆ. ದೇವಸ್ಥಾನಗಳು ಸ್ವಾತಂತ್ರವಾಗಿ ನಡೆಯಬೇಕು. ನಮಗೆ ಎಲ್ಲ ಸರಕಾರವು ಒಂದೇ. ನಾವು ಯಾವ ಪಕ್ಷದ ಬಗ್ಗೆಯೂ ಆಕ್ಷೇಪ ಮಾಡುವುದಿಲ್ಲ. ದೇವಸ್ಥಾನ ಮತ್ತು ಮಠದ ವಿಚಾರದಲ್ಲಿ ಎಲ್ಲ ಪಕ್ಷಗಳು ಹಾಗೂ ಟ್ರಸ್ಟಿಗಳ ಸಹಕಾರವನ್ನು ನಾವು ಬಯುತ್ತೇವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ, ಸೋದೆ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಕಾಣಿಯೂರು ವಿದ್ಯಾ ವಲ್ಲಭ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News