ಮಂಗಳೂರು ದಸರಾ ಉತ್ಸವಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ

Update: 2018-10-14 16:58 GMT

ಮಂಗಳೂರು, ಅ.14: ಮಂಗಳೂರು ದಸರಾ ಜನರ ಉತ್ಸವ ಎಂದು ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಶ್ಲಾಘಿಸಿದರು.

ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಉತ್ಸವವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಸಮಾರಂಭದಲ್ಲಿ ಕುಮಾರ ಸ್ವಾಮಿ ದಸರಾ ಉತ್ಸವದ ಧ್ವಜವನ್ನು ಉತ್ಸವ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್‌ರವರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು.

ರಾಜ್ಯದಲ್ಲಿ ಮೈಸೂರು ಅರಸರ ರಾಜ ಪರಂಪರೆಯೊಂದಿಗೆ ಮೈಸೂರು ದಸರಾ ನಡೆದು ಬಂದಿದೆ. ರಾಜ್ಯದ ಹಲವು ಕಡೆಗಳಲ್ಲಿ ದಸರಾ ಉತ್ಸವ ಆಚರಣೆಗೆ ಅನುದಾನದ ಬೇಡಿಕೆ ಇಡುತ್ತಿದ್ದಾರೆ. ಆದರೆ ಮಂಗಳೂರು ದಸರಾ ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ನಡೆಯುತ್ತಿದೆ. ಜನರೆ ಸೇರಿ ದಸರಾ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಇದೊಂದು ಜನರೇ ಸೇರಿ ನಡೆಸುತ್ತಿರುವ ಉತ್ಸವವಾಗಿದೆ ಎಂದು ಕುಮಾರ ಸ್ವಾಮಿ ತಿಳಿಸಿದ್ದಾರೆ.

ಇದೊಂದು ಅದೃಷ್ಟದ ಕ್ಷಣ

 ಕುದ್ರೋಳಿ ಕ್ಷೇತ್ರದಲ್ಲಿ ಮಂಗಳೂರು ದಸರಾ ಉತ್ಸವವನ್ನು ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವುದು ನನ್ನ ಅದೃಷ್ಟದ ಕ್ಷಣವಾಗಿದೆ. ಈ ನಾಡು ಕಂಡ ಮಹಾನ್ ಧಾರ್ಮಿಕ ನಾಯಕ ನಾರಾಯಣ ಗುರೂಜಿಯಿಂದ ಮಾನರೆಲ್ಲಾ ಒಂದು ಮತ, ಒಂದು ಜಾತಿ, ಒಂದು ದೇವರಿಗೆ ಸೇರಿದವರು ಎನ್ನುವ ಸಂದೇಶ ದೊಂದಿಗೆ ಸ್ಥಾಪನೆಯಾದ ಕುದ್ರೋಳಿ ಕ್ಷೇತ್ರ ಜನಾರ್ದನ ಪೂಜಾರಿಯವರ ಮೂಲಕ ನವೀಕರಣಗೊಂಡಿದೆ. ಈಗಿನ ರಾಜಕಾರಣಿಗಳಿಗೆ ಮಾದರಿಯಾಗುವ ಸರಳ ಸಜ್ಜನಿಕೆಯ ರಾಜಕಾರಣಿ ಅವರ ಆಹ್ವಾನಕ್ಕೆ ಗೌರವ ಸೂಚಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿದೆ ಎಂದು ಕುಮಾರ ಸ್ವಾಮಿ ತಿಳಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಕುಮಾರ ಸ್ವಾಮಿಯವರನ್ನು ಜನಾರ್ದನ ಪೂಜಾರಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೋಟ ಶ್ರೀನಿವಾಸ ಪುಜಾರಿ, ಐವನ್ ಡಿ ಸೋಜ, ರಾಜೇಶ್ ನಾಯ್ಕಾ, ವೇದವ್ಯಾಸ ಕಾಮತ್, ಹರೀಶ್ ಕುಮಾರ್, ಭೋಜೇಗೌಡ, ಮಾಜಿ ಸಚಿವರಾದ ಬಿ.ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಜೆ.ಆರ್.ಲೋಬೊ, ಮನಪಾ ಮೇಯರ್ ಭಾಸ್ಕರ ಕೆ, ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಮಾಧವ ಸುವರ್ಣ, ಕ್ಷೇತ್ರದ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉರ್ಮಿಳಾ ರಮೇಶ್ ಪದಾಧಿಕಾರಿಗಳಾದ ಬಿ.ಕೆ.ತಾರಾನಾಥ್, ರವಿಶಂಕರ್ ಮಿಜಾರ್, ಕೆ. ಮಹೇಶ್‌ಚಂದ್ರ, ಸದಸ್ಯರಾದ ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜೆ.ಸುವರ್ಣ, ಡಾ. ಅನಸೂಯ ಬಿ.ಟಿ, ರಾಧಾಕೃಷ್ಣ, ಹರಿಶ್ಚಂದ್ರ, ಡಿ.ಡಿ.ಕಟ್ಟೆಮಾರ್, ದೇವೇಂದ್ರ ಪುಜಾರಿ, ಶೇಖರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಖಜಾಂಜಿ ಪದ್ಮ ರಾಜ್ ಆರ್ ಸ್ವಾಗತಿಸಿದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News