ಸಮಾಜದಲ್ಲಿ ಮರೆಯಾಗುತ್ತಿರುವ ಮಾನವೀಯತೆ: ನ್ಯಾ.ಸಂತೋಷ್ ಹೆಗ್ಡೆ

Update: 2018-10-14 17:12 GMT

ಮಂಗಳೂರು, ಅ.14: ಆಧುನಿಕ ಸಮಾಜದಲ್ಲಿ ಮಾನವೀಯತೆ ಸಂಪೂರ್ಣ ಮರೆಯಾಗುತ್ತಿದೆ. ಒಬ್ಬರಿಗೊಬ್ಬರು ಆಸರೆಯಾಗಬೇಕಾದ ಸಮಯದಲ್ಲಿ ವ್ಯಾವಹಾರಿಕವಾಗಿ ಪರಿಗಣಿಸಲ್ಪಡುತ್ತಿರುವುದು ದುರಂತ ಎಂದು ನ್ಯಾ.ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ನಗರದ ಓಶಿಯನ್ ಪರ್ಲ್ ಹೊಟೇಲ್‌ನಲ್ಲಿ ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ (ಎಂಎಂಎ)ನಿಂದ ಹಮ್ಮಿಕೊಳ್ಳಲಾಗಿದ್ದ ಎಂಎಂಎ ಔಟ್‌ಸ್ಟಾಂಡಿಂಗ್ ಮ್ಯಾನೇಜರ್ ಅವಾರ್ಡ್-18 ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಮಾಜದಲ್ಲಿ ಅಮಾನವೀಯತೆ ರೋಗದಂತೆ ಉಲ್ಬಣಿಸುತ್ತಿದೆ. ಇದಕ್ಕೆ ಔಷಧದ ಅಗತ್ಯವಿದೆ. ಇದನ್ನು ಬದಲಾಯಿಸುವುದು ಕಷ್ಟ. ಇಲ್ಲಿಯವರೆಗೆ ತಾನು 1,022 ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ, ಮಾನವೀಯತೆ ಬಗ್ಗೆ ಉಪನ್ಯಾಸ ನೀಡಿದ್ದೇನೆ. ನನ್ನ ಕಾಲದಲ್ಲಿ ಇದು ಸಾಧ್ಯವಾಗುತ್ತದೋ ಇಲ್ಲವೋ ತಿಳಿಯದು. ಆದರೆ ಯುವಕರು ಮನಸು ಮಾಡಿದರೆ ಇದು ಸಾಧ್ಯವಾಗಲಿದೆ. ಯುವ ಜನತೆಯ ಮೇಲೆ ಭರವಸೆಯಿದೆ ಎಂದು ತಿಳಿಸಿದರು.

ಇಂದಿನ ಜನಜೀವನದಲ್ಲಿ ಮಾನವೀಯತೆಗೆ ಸ್ಥಾನವೇ ಇಲ್ಲದಾಗುತ್ತಿದ್ದು, ಇದಕ್ಕೆ ಹಲವು ನಿದರ್ಶನಗಳು ಸಿಗುತ್ತವೆ. 2008ರಲ್ಲಿ ಬಾಗಲಕೋಟೆಯಿಂದ ಮಗುವಿನೊಂದಿಗೆ ದಂಪತಿ ಲೋಕಾಯುಕ್ತ ಕಚೇರಿಗೆ ಬಂದಿದ್ದರು. ಆ ಮಗುವಿಗೆ ಗುದದ್ವಾರವೇ ಇರಲಿಲ್ಲ. ಚಿಕಿತ್ಸೆಗೆ ಸಾಕಷ್ಟು ಹಣವಿಲ್ಲವೆಂದು ಅಳಲು ತೋಡಿಕೊಂಡರು. ಬಳಿಕ ಪ್ರತಿಷ್ಠಿತ ಆಸ್ಪತ್ರೆಯೊಂದು ಆ ಮಗುವಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿತು. ಆದರೆ ಕೆಲ ದಿನಗಳಲ್ಲೇ ಆ ದಂಪತಿಯಿಂದ ಫೀಸ್ ಹೆಸರಲ್ಲಿ ಹಣ ಕೇಳಲಾರಂಭಿಸಿತು. ಈ ವೇಳೆ ವೈದ್ಯರ ದುರಾಸೆಯಿಂದ ಕುಟುಂಬ ಸಂಕಷ್ಟಕ್ಕೀಡಾಯಿತು. ಬಳಿಕ ಲೋಕಾಯುಕ್ತ ಸಂಸ್ಥೆಯಿಂದಲೆ ಆ ಬಾಲಕನಿಗೆ ಚಿಕಿತ್ಸೆ ಕೊಡಿಸಿ ಗುಣಮುಖ ಮಾಡಲಾಯಿತು ಎಂದು ಘಟನೆಯೊಂದನ್ನು ನೆನಪಿಸಿಕೊಂಡರು.

ಸಮಾಜದಲ್ಲಿ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ. ಭ್ರಷ್ಟಾಚಾರವನ್ನು ಮಾಡಿ, ಜೈಲಿಗೆ ಹೋಗಿ ಬರುವುದು ಸಾಮಾನ್ಯವಾಗುತ್ತಿದೆ. ಈಗ ಅದು ಫ್ಯಾಶನ್ ಆಗುತ್ತಿದೆ. ಇಂತಹ ನಕಾರಾತ್ಮಕ ಬೆಳವಣಿಗೆ ತೊಲಗಬೇಕು. ಪ್ರತಿಯೊಬ್ಬರು ಭ್ರಷ್ಟಾಚಾರವನ್ನು ವಿರೋಧಿಸಬೇಕು. ಶಿಕ್ಷೆಯಿಂದ ಯಾವುದೇ ಬದಲಾವಣೆ ಯನ್ನು ಅಪೇಕ್ಷಿಸುವುದು ಸರಿಯಲ್ಲ ಎಂದರು.

ಚೀನಾದಲ್ಲಿ ಭ್ರಷ್ಟಾಚಾರ ಮಾಡಿದವರಿಗೆ ಗಲ್ಲು ಶಿಕ್ಷೆ ನೀಡುವ ಪದ್ಧತಿಯಿದೆ. ಹಾಗಾಗಿಯೇ ಚೀನಾ ಭ್ರಷ್ಟಾಚಾರ ಪ್ರಮಾಣದಲ್ಲಿ ಕೆಳಹಂತದಲ್ಲಿದೆ. ಭಾರತವು ಪ್ರಯತ್ನಪಟ್ಟಲ್ಲಿ ಇನ್ನು ಒಂದು-ಎರಡು ದಶಕಗಳಲ್ಲಿ ಆ ಸಾಧನೆಯನ್ನು ಮಾಡಲಿದೆ. ಯುವ ಜನಾಂಗದಿಂದ ಬದಲಾವಣೆ ಸಾಧ್ಯ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಅತಿಥಿಯಾಗಿ ಆಗಮಿಸಿದ್ದ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ಮಾತನಾಡಿ, ದೇಶಕ್ಕೆ ಕೌಶಲಯುಕ್ತ, ಬದ್ಧತೆ ಹೊಂದಿದ ಪ್ರತಿಭೆಗಳ ಅಗತ್ಯತೆ ಯಿದೆ. ಸಮಾಜದಲ್ಲಿನ ಭ್ರಷ್ಟಾಚಾರ ತೊಲಗಬೇಕೆಂದರೆ ಯುವ ಜನಾಂಗವೂ ಅದರ ವಿರುದ್ಧ ಹೋರಾಡಬೇಕು. ಲೋಕಾಯುಕ್ತರಿದ್ದಾಗ ನ್ಯಾ.ಸಂತೋಷ್ ಹೆಗ್ಡೆ ಹಲವು ಭ್ರಷ ಕುಳಗಳನ್ನು ಹೊರಗೆಳೆದಿದ್ದರು. ಅಂತಹ ಪ್ರಾಮಾಣಿಕರು ಎಲ್ಲ ಇಲಾಖೆಗಳಲ್ಲೂ ಇದ್ದರೆ ಭ್ರಷ್ಟಾಚಾರವನ್ನು ಹೊಡೆದೋಡಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂಎಂಎ ಅಧ್ಯಕ್ಷ ಮಾರ್ಸೆಲ್ ಮೊಂಟೆರೊ, ಕಾರ್ಯದರ್ಶಿ ಡಾನ್ ಪ್ರಕಾಶ್, ಕೆ.ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯ ಕ್ರಮದಲ್ಲಿ ಅರ್ಚನಾ ಪ್ರಾರ್ಥಿಸಿದರು. ಎಂಎಂಎ ಅಧ್ಯಕ್ಷ ಮಾರ್ಸೆಲ್ ಮೊಂಟೆರೊ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News