ಶೀಘ್ರದಲ್ಲಿ ರೈಲು ಪ್ರಯಾಣಿಕರಿಗಾಗಿ ವಿಶೇಷ ಆ್ಯಪ್

Update: 2018-10-14 18:13 GMT

ಹೊಸದಿಲ್ಲಿ, ಅ. 14: ಇನ್ನು ಮುಂದೆ ರೈಲು ಪ್ರಯಾಣಿಕರು ಮೊಬೈಲ್ ಆ್ಯಪ್ ಮೂಲಕ ದೂರು ದಾಖಲಿಸಲು ಸಾಧ್ಯವಿದೆ. ಈ ದೂರು ‘ಝೀರೋ ಎಫ್‌ಐಆರ್’ ಆಗಿ ದಾಖಲಾಗಲಿದೆ ಹಾಗೂ ರೈಲ್ವೆ ಪೊಲೀಸ್ ಪಡೆ (ಆರ್‌ಪಿಎಫ್)ಕೂಡಲೇ ತನಿಖೆ ನಡೆಸಲಿದೆ ಎಂದು ಆರ್‌ಪಿಎಫ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

 ಈ ಪ್ರಮುಖ ಯೋಜನೆ ಅಡಿಯಲ್ಲಿ ಕಿರುಕುಳ, ಕಳವು, ಮಹಿಳೆಯರ ವಿರುದ್ಧದ ಅಪರಾಧಗಳ ವಿರುದ್ಧ ಮೊಬೈಲ್ ಆ್ಯಪ್ ಮೂಲಕ ದೂರು ನೀಡಬಹುದು. ಮದ್ಯಪ್ರದೇಶದಲ್ಲಿ ಈಗಾಗಲೇ ಈ ಸೌಲಭ್ಯ ಅಸ್ತಿತ್ವದಲ್ಲಿ ಇದೆ. ಇದನ್ನು ದೇಶಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ದೂರು ನೀಡಲು ಪ್ರಯಾಣಿಕರು ಮುಂದಿನ ನಿಲ್ದಾಣ ಬರುವವರೆಗೆ ಕಾಯಬೇಕಿಲ್ಲ. ಅವರು ಮೊಬೈಲ್ ಆ್ಯಪ್ ಮೂಲಕ ದೂರು ನೀಡಬಹುದು. ಕೂಡಲೇ ಆರ್‌ಪಿಎಫ್ ಸಂಬಂಧಿತರನ್ನು ಸಂಪರ್ಕಿಸಿ ನೆರವು ನೀಡಲಿದೆ ಎಂದು ಆರ್‌ಪಿಎಫ್‌ನ ಡಿಜಿ ಅರುಣ್ ಕುಮಾರ್ ತಿಳಿಸಿದ್ದಾರೆ.

ಈ ದೂರನ್ನು ‘ಝೀರೋ ಎಫ್‌ಐಆರ್’ ಎಂದು ಪರಿಗಣಿಸಲಾಗುವುದು ಹಾಗೂ ಕೂಡಲೇ ತನಿಖೆ ಆರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ. ‘ಝಿರೋ ಎಫ್‌ಐಆರ್’ ಅಂದರೆ, ಎಫ್‌ಐಆರ್ ಅನ್ನು ಯಾವುದೇ ಪೊಲೀಸ್ ಠಾಣೆಯಲ್ಲಿ ದಾಖಲಿಸುವುದು (ಘಟನೆ ನಡೆದ ಸ್ಥಳ, ವ್ಯಾಪ್ತಿಯ ಪರಿಗಣಿಸದೆ). ಅನಂತರ ಸೂಕ್ತ ಪೊಲೀಸ್ ಠಾಣೆಗೆ ವರ್ಗಾಯಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಪ್ರಯಾಣಿಕರು ಘಟನೆ ಬಗ್ಗೆ ದೂರು ದಾಖಲಿಸಲು ಬಯಸಿದರೆ, ಟಿಕೆಟ್ ಪರಿಶೀಲಕರು ನೀಡುವ ದೂರು ಅರ್ಜಿ ತುಂಬಿಸಬೇಕು. ಅನಂತರ ಅದನ್ನು ಮುಂದಿನ ನಿಲ್ದಾಣದಲ್ಲಿ ಆರ್‌ಪಿಎಫ್ ಅಥವಾ ಜಿಆರ್‌ಪಿಗೆ ಸಲ್ಲಿಸಬೇಕು. ಈ ಅರ್ಜಿ ಎಫ್‌ಐಆರ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಕ್ರಮ ಕೈಗೊಳ್ಳುವುದು ವಿಳಂಬವಾಗುತ್ತಿತ್ತು ಹಾಗೂ ಪ್ರಯಾಣಿಕರಿಗೆ ತತ್‌ಕ್ಷಣ ಪರಿಹಾರ ದೊರಕುತ್ತಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News