ಬಾಲಕನ ಮೇಲೆ ಗುಂಡು ಹಾರಿಸಿದ ಆರೋಪ: ಇಬ್ಬರ ಥಳಿಸಿ ಹತ್ಯೆ

Update: 2018-10-15 14:40 GMT

ಲಕ್ನೊ, ಅ.15: ಧಾರ್ಮಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ 12ರ ಹರೆಯದ ಬಾಲಕನ ಮೇಲೆ ಗುಂಡು ಹಾರಿಸಿದ ಆರೋಪಿಗಳ ಮೇಲೆ ಉದ್ರಿಕ್ತ ಗುಂಪು ನಡೆಸಿದ ದಾಳಿ ಮತ್ತು ಹಲ್ಲೆ ಘಟನೆಯಲ್ಲಿ ಇಬ್ಬರು ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

  ಮುಸಾಫಿರ್‌ಖಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಸರೈಯ ಗ್ರಾಮದಲ್ಲಿ ಶನಿವಾರ ನಡೆದಿದ್ದ ಧಾರ್ಮಿಕ ಕಾರ್ಯಕ್ರಮವೊಂದರ ಸಂದರ್ಭ ಬಾಲಕನ ಮೇಲೆ ಗುಂಡು ಹಾರಿಸಲಾಗಿತ್ತು. ಗಾಯಗೊಂಡ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ರಾಹುಲ್ ಸಿಂಗ್ ಹಾಗೂ ದಿಲೀಪ್ ಯಾದವ್ ವಿನಾಕಾರಣ ತಗಾದೆ ತೆಗೆದು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಬಾಲಕನ ಕೈಗೆ ಗುಂಡೇಟು ತಗಲಿದೆ. ಇದರಿಂದ ಆಕ್ರೋಶಗೊಂಡ ಜನರ ಗುಂಪೊಂದು ಆರೋಪಿಗಳ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿದೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪಿನ ಹಿಡಿತದಿಂದ ಇಬ್ಬರನ್ನೂ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡಿದ್ದ ಇಬ್ಬರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮುಸಾಫಿರ್‌ಖಾನಾ ಪೊಲೀಸ್ ಠಾಣಾಧಿಕಾರಿ ವಿಶ್ವನಾಥ್ ಯಾದವ್ ತಿಳಿಸಿದ್ದಾರೆ.

ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ರವಾನಿಸಲಾಗಿದ್ದು ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮೃತ ಪಟ್ಟವರ ಸಂಬಂಧಿಕರು ನೀಡಿದ ದೂರಿನಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಹಲ್ಲೆ ನಡೆಸಿದ ಗ್ರಾಮಸ್ಥರನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News