ಸತತ ಹತ್ತನೇ ದಿನ ಡೀಸೆಲ್ ಬೆಲೆಯೇರಿಕೆ

Update: 2018-10-15 14:53 GMT

ಹೊಸದಿಲ್ಲಿ, ಅ.15: ಡೀಸೆಲ್ ಬೆಲೆ ಸತತ ಹತ್ತನೇ ದಿನ ಏರಿಕೆಯಾಗುವ ಮೂಲಕ 10 ದಿನಗಳ ಹಿಂದೆ ಸರಕಾರ ಘೋಷಿಸಿದ್ದ ತೆರಿಗೆ ದರ ಕಡಿತದ ಪ್ರಯೋಜನವನ್ನು ಅಳಿಸಿಹಾಕಿದೆ. ಆದರೆ ಸೋಮವಾರ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ.

ಅಕ್ಟೋಬರ್ 5ರಂದು ಸರಕಾರ ಅಬಕಾರಿ ಸುಂಕವನ್ನು 1.5 ರೂ.ನಷ್ಟು ಕಡಿತಗೊಳಿಸಿದ್ದು ಜೊತೆಗೆ 1 ರೂ. ಸಬ್ಸಿಡಿ ನೀಡುವಂತೆ ತೈಲ ಸಂಸ್ಥೆಗಳಿಗೆ ಸೂಚಿಸಿತ್ತು. ಇದರಿಂದ ತೈಲ ಬೆಲೆಯಲ್ಲಿ ಅ.5ರಂದು 2.50 ರೂ. ಕಡಿತವಾಗಿತ್ತು. ಆದರೆ ಆ ಬಳಿಕ ಬೆಲೆ ನಿರಂತರವಾಗಿ ಏರಿಕೆಯಾಗಿದೆ. ಎನ್‌ಡಿಎ ಸರಕಾರದ ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಕೇವಲ 2 ಬಾರಿ ಮಾತ್ರ ಅಬಕಾರಿ ಸುಂಕದಲ್ಲಿ ಕಡಿತ ಮಾಡಲಾಗಿದೆ.

ಸೋಮವಾರ ಡೀಸೆಲ್ ಬೆಲೆ ಲೀಟರ್‌ಗೆ 8 ಪೈಸೆಯಷ್ಟು ಹೆಚ್ಚಳವಾಗಿದೆ. ಕಳೆದ 10 ದಿನಗಳಿಂದ ಡೀಸೆಲ್ ಬೆಲೆ ಒಟ್ಟು 2.51 ರೂ.ನಷ್ಟು ಏರಿಕೆಯಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ ತೈಲ ಕಂಪೆನಿಗಳು ತೈಲ ಉತ್ಪನ್ನಗಳ ಬೆಲೆಯನ್ನು ದೈನಂದಿನವಾಗಿ ಪರಿಷ್ಕರಿಸಲು ನಿರ್ಧರಿಸಿದ ಬಳಿಕ ಇದು ದಾಖಲೆ ಪ್ರಮಾಣದ ಹೆಚ್ಚಳವಾಗಿದೆ. ದಿಲ್ಲಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 75.46 ರೂ. , ಪೆಟ್ರೋಲ್ ಬೆಲೆ ಲೀಟರ್‌ಗೆ 84 ರೂ. ಆಗಿದೆ.

ಮುಂಬೈಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 79.11 ರೂ, ಪೆಟ್ರೋಲ್ ಬೆಲೆ 88.18 ರೂ. ಆಗಿದೆ. 2014ರ ನವೆಂಬರ್‌ನಿಂದ 2016ರ ಜನವರಿವರೆಗಿನ ಅವಧಿಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಒಂಬತ್ತು ಕಂತುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 11.77 ರೂ. ಹಾಗೂ 13.47 ರೂ.ನಷ್ಟು ಹೆಚ್ಚಿಸಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಿಂದ ಆರ್ಥಿಕ ಸ್ಥಿತಿಗತಿಗೆ ಸಮಸ್ಯೆಯಾಗಬಾರದೆಂಬ ಉದ್ದೇಶದಿಂದ ಅಬಕಾರಿ ಸುಂಕ ಏರಿಸಲಾಗಿದೆ ಎಂದು ಸರಕಾರ ಹೇಳಿಕೆ ನೀಡಿತ್ತು. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಛಾತೈಲದ ಬೆಲೆ ಏರಿಕೆಯಾದ ಬಳಿಕ ಕೇವಲ 2 ಬಾರಿ- ಕಳೆದ ವರ್ಷದ ಅಕ್ಟೋಬರ್‌ನಲ್ಲಿ 2 ರೂ, ಈ ವರ್ಷದ ಅಕ್ಟೋಬರ್‌ನಲ್ಲಿ 1.50 ರೂ. ಅಬಕಾರಿ ಸುಂಕ ಕಡಿತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News