ನೇತಾಜಿ ಪ್ರೀಮಿಯರ್ ಲೀಗ್ ಟ್ರೋಫಿ ಅನಾವರಣ

Update: 2018-10-15 15:21 GMT

ಪರ್ಕಳ, ಅ.15: ಸ್ಥಾಪನೆಗೊಂಡು 43 ವರ್ಷಗಳನ್ನೂ ಪೂರ್ಣಗೊಳಿಸಿರುವ ನೇತಾಜಿ ಸ್ಪೋರ್ಟ್ಸ್ ಕ್ಲಬ್, ಸ್ನೇಹ-ಸೌಹಾರ್ದದ ಉದ್ದೇಶದೊಂದಿಗೆ ಇದೇ ಅ.20 ಮತ್ತು 21ರಂದು ಇದೇ ಮೊದಲ ಬಾರಿಗೆ ನೇತಾಜಿ ಪ್ರೀಮಿಯರ್ ಲೀಗ್ (ಎನ್‌ಪಿಎಲ್) ಕ್ರಿಕೆಟ್ ಪಂದ್ಯಾವಳಿ ‘ವರ್ಣ ಸಮರ’ವನ್ನು ಪರ್ಕಳ ಪ್ರೌಢ ಶಾಲಾ ಮೈದಾನದಲ್ಲಿ ಆಯೋಜಿಸಿದೆ.

ಈ ಪಂದ್ಯಾವಳಿಯಲ್ಲಿ ನೀಲಿ- ನೇರಳೆ- ಹಸಿರು- ಹಳದಿ- ಕೆಂಪು- ಕೇಸರಿ ವರ್ಣಗಳ ಹೆಸರಿನ ಒಟ್ಟು ಆರು ತಂಡಳು ಪಾಲ್ಗೊಳ್ಳಲಿವೆ. ನಾಲ್ಕು ದರ್ಜೆ ಗಳಲ್ಲಿ ವಿಂಗಡಿಸಲಾಗಿದ್ದ ಆಟಗಾರರ ಹರಾಜು ಪ್ರಕ್ರಿಯೆ ಈಗಾಗಲೇ ನಡೆದಿದ್ದು, ಆರು ತಂಡಗಳನ್ನು ಹೆಸರಿಸಲಾಗಿದೆ.

ಈ ಆರು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದ್ದು, ಮೊದಲ ಹಂತದಲ್ಲಿ ಲೀಗ್ ನೆಲೆಯಲ್ಲಿ ಪಂದ್ಯಗಳ ನಡೆಯಲಿವೆ. ಗುಂಪಿನಿಂದ ತಲಾ ಎರಡು ತಂಡಳು ನಾಕೌಟ್ ಹಂತ ಪ್ರವೇಶಿಸಲಿವೆ.

ಪಂದ್ಯಾವಳಿಯ ಟ್ರೋಫಿ, ಸಮವಸ್ತ್ರ ಹಾಗೂ ಹಾಡುಗಳ ಅನಾವರಣ ಇತ್ತೀಚೆಗೆ ಇಲ್ಲಿ ನಡೆಯಿತು. ಪರ್ಕಳದ ಹಿರಿಯ ಉದ್ಯಮಿ ಮಂಜುನಾಥ ಉಪಾಧ್ಯ ಟ್ರೋಫಿಯನ್ನು ಬಿಡುಗಡೆಗೊಳಿಸಿದರು. ಸ್ನೇಹ ಬೆಸುಗೆಯ ಮೂಲಕ ಎಲ್ಲರನ್ನು ಒಂದುಗೂಡಿಸುವ ನಿಟ್ಟಿನಲ್ಲಿ ನೇತಾಜಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಂಡಿರುವುದು ಸಂತಸದ ವಿಷಯ ಎಂದರು.

ಪಂದ್ಯಾವಳಿಯ ಹಾಡನ್ನು ಶಂಕರ್ ಕುಲಾಲ್ ರಚಿಸಿ ಹಾಡಿದ್ದು ಅದನ್ನು ಹಾಜಿ ಅಬೂಬಕರ್ ಬಿಡುಗಡೆಗೊಳಿಸಿದರು. ವಿವಿಧ ತಂಡಗಳ ವರ್ಣಮಯ ಧಿರಿಸನ್ನು ಮಂಗಳೂರು ಪ್ರೀಮಿಯರ್ ಲೀಗ್ ಪಂದ್ಯಾಟದ ಸಂಚಾಲಕ ಮಹಮ್ಮದ್ ಸಿರಾಜುದ್ದೀನ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಕ್ಲಬ್‌ನ ಅಧ್ಯಕ್ಷ ಬಾಲಕೃಷ್ಣ ಪರ್ಕಳ ಸ್ವಾಗತಿಸಿ ಶಂಕರ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News