ಗಾಂಧಿ-150 ಅಭಿಯಾನಕ್ಕೆ ಮಂಗಳೂರಿನಲ್ಲಿ ಸ್ವಾಗತ

Update: 2018-10-15 15:24 GMT

ಮಂಗಳೂರು, ಅ.15: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯ 150ನೇ ವರ್ಷಾಚರಣೆ ಹಿನ್ನೆಲೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧಿ ಅಭಿಯಾನ- 150 ಜಾಥಾ ಸೋಮವಾರ ಮಂಗಳೂರಿಗೆ ಆಗಮಿಸಿತು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಸಹಾಯಕ ಆಯುಕ್ತೆ ಪ್ರಮೀಳಾ ಸ್ವಾಗತಿಸಿದರು. ಈ ಸಂದರ್ಭ ಮಾತನಾಡಿದ ಅವರು, ಗಾಂಧೀಜಿಯವರ ಸಂದೇಶಗಳು ಸರ್ವಕಾಲಕ್ಕೂ ಸಲ್ಲುವಂತದ್ದಾಗಿದೆ. ಈ ನಿಟ್ಟಿನಲ್ಲಿ ಇದನ್ನು ನಿರಂತರವಾಗಿ ಪಾಲಿಸುತ್ತಾ ಬರಬೇಕು ಎಂದು ಹೇಳಿದರು.

ದ.ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ ಮಾತನಾಡಿ, ಮಹಾತ್ಮಾ ಗಾಂಧೀಜಿಯವರ ಚಿಂತನೆಗಳು ದೇಶವನ್ನು ಯಾವುದೇ ಹಿಂಸೆ, ಅನ್ಯಾಯ ಇಲ್ಲದೇ ಪ್ರಗತಿಯತ್ತ ಕೊಂಡೊಯ್ಯುವತ್ತ ಗುರಿಯಿಟ್ಟಿತ್ತು. ಈ ನಿಟ್ಟಿನಲ್ಲಿ ವಾರ್ತಾ ಇಲಾಖೆಯು ಗಾಂಧೀ 150ನೇ ಜಯಂತಿ ಪ್ರಯುಕ್ತ ಅಭಿಯಾನ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಾಂಧಿ ಅಭಿಯಾನ ರಥಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಭಾರತ್ ಸೇವಾದಳದ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ಮಹಾತ್ಮಾ ಗಾಂಧಿ ಶಾಂತಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಇಸ್ಮಾಯೀಲ್, ಸೇವಾದಳದ ಮುಖಂಡರಾದ ಟಿ.ಕೆ. ಸುಧೀರ್, ಪ್ರಭಾಕರ ಶ್ರೀಯಾನ್, ಬದ್ರಿಯಾ ಕಾಲೇಜು ಪ್ರಾಂಶುಪಾಲ ಯೂಸುಫ್ ಮತ್ತಿತರರು ಉಪಸ್ಥಿತರಿದ್ದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಬಿ.ಎ. ಖಾದರ್ ಶಾ ಸ್ವಾಗತಿಸಿದರು.

ಗಾಂಧೀಜಿಯವರ ಸಂದೇಶಗಳನ್ನು ಸಾರುವ ಸ್ಥಬ್ಧಚಿತ್ರ ಹಾಗೂ ಗಾಂಧೀಜಿಯವರ ಪ್ರಿಯ ಭಜನೆ, ಸಂಗೀತಗಳನ್ನು ಸಾರುತ್ತಾ ಈ ಅಭಿಯಾನ ಸಂಚರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News