ಉಡುಪಿ: 9ನೇ ತತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ, ಗಣಿತ ಒಲಂಪಿಯಾಡ್‌ಗೆ ಉಚಿತ ಸ್ಪರ್ಧೆ

Update: 2018-10-15 16:53 GMT

ಉಡುಪಿ, ಅ.15: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಪ್ರೌಢಶಾಲೆಗಳ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿಜ್ಞಾನ-ಗಣಿತ ಒಲಂಪಿಯಾಡ್ ಸ್ಪರ್ಧೆಯನ್ನು ಉಚಿತವಾಗಿ ಆಯೋಜಿಸ ಲಾಗುತ್ತಿದೆ.

ಗಣಿತ ಒಲಂಪಿಯಾಡ್ ಸ್ಪರ್ಧೆ ಪಠ್ಯಪೂರಕ ಚಟುವಟಿಕೆಯಾಗಿದ್ದು, ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ, ಚುರುಕುತನ ಹಾಗೂ ಕೌಶಲ್ಯಗಳನ್ನು ಬೆಳೆಸುವಲ್ಲಿ ಮಹತ್ವಪೂರ್ಣವಾಗಿದೆ. ರಾಜ್ಯದ 9ನೇ ತರಗತಿಯ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ.

ವಿಜ್ಞಾನ-ಗಣಿತ ಒಲಂಪಿಯಾಡ್ ಸ್ಪರ್ಧೆಯಲ್ಲಿ ರಾಜ್ಯದ ಯಾವುದೇ ಸರಕಾರಿ/ ಅನುದಾನಿತ/ ಅನುದಾನರಹಿತ ಶಾಲೆಗಳ 9ನೇ ತರಗತಿ ವಿದ್ಯಾರ್ಥಿ ಭಾಗವಹಿಸಬಹುದಾಗಿದೆ. ಜಿಲ್ಲಾ ಮಟ್ಟದ ಸ್ಪರ್ಧೆಯು ನ. 25ರಂದು ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಏಕಕಾಲಕ್ಕೆ ಆಯೋಜನೆಗೊಳ್ಳಲಿದೆ. ಜಿಲ್ಲಾ ಮಟ್ಟದಲ್ಲಿ ಗರಿಷ್ಟ ಅಂಕ ಪಡೆಯುವ ಮೂವರು ವಿದ್ಯಾರ್ಥಿಗಳಿಗೆ 2000 ರೂ.ಗಳ ನಗದು ಬಹುಮಾನ ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು.

ಅಲ್ಲದೇ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳ ಶಾಲೆಗಳಿಗೆ 500 ರೂ. ಮೊತ್ತದ ಕೊಡುಗೆ ನೀಡಲಾಗುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ವಿಜೇತ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯುತ್ತಾರೆ.

ರಾಜ್ಯ ಮಟ್ಟದ ಸ್ಪರ್ಧೆ ಡಿ.15-16ರಂದು ಮೈಸೂರಿನಲ್ಲಿ ಆಯೋಜನೆ ಗೊಳ್ಳಲಿದೆ. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತ ಮೂವರು ವಿದ್ಯಾರ್ಥಿಗಳಿಗೆ ತಲಾ 10,000 ರೂ.ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳ ಶಾಲೆಗಳಿಗೆ 5000 ರೂ. ಮೊತ್ತದ ಕೊಡುಗೆ ನೀಡಿ ಗೌರವಿಸಲಾಗುವುದು.

ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸ್ಪರ್ಧೆಯು 1ರಿಂದ 9ನೇ ತರಗತಿಯ ವಿಜ್ಞಾನ - ಗಣಿತ ಪಠ್ಯವನ್ನು ಆಧರಿಸಿದ್ದು, ನೂರು ನಿಮಿಷಗಳ ಅವಧಿಯ, ನೂರು ಬಹು ಆಯ್ಕೆಯ ಪ್ರಶ್ನೆಗಳುಳ್ಳ ಓಎಂಆರ್ ಶೀಟ್ ಪದ್ದತಿಯಲ್ಲಿ ಲಿಖಿತ ರೂಪದಲ್ಲಿ ನಡೆಯಲಿದೆ. ಪ್ರಶ್ನೆಗಳನ್ನು ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ಪ್ರತ್ಯೇಕವಾಗಿ ಒದಗಿಸಲಾಗುವುದು.

ಈ ಹಿನ್ನೆಲೆಯಲ್ಲಿ ಪ್ರತಿ ಶಾಲೆಯಿಂದ ಅತ್ಯುತ್ತಮ ಪ್ರತಿಭೆ ತೋರಿದ 10 ವಿದ್ಯಾರ್ಥಿಗಳ ಹೆಸರು/ ವಿಳಾಸಗಳ ಸಂಪೂರ್ಣ ವಿವರಗಳೊಂದಿಗೆ ಅ.31ರ ಒಳಗೆ ಗೌರವ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ಬೆಂಗಳೂರು ಇಲ್ಲಿಗೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಕರಾವಿಪ ಕಚೇರಿ ದೂ.ಸಂಖ್ಯೆ: 080-26718939, ಮೊ: 9483549159ನ್ನು ಸಂಪರ್ಕಿಸುವಂತೆ ಕ.ರಾ.ವಿ.ಪ. ಗೌರವ ಕಾರ್ಯದರ್ಶಿ ಗಿರೀಶ್ ಕಡ್ಲೇವಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News