ಉಡುಪಿ: ಮಗುವಿನ ಪೋಷಕತ್ವ ಯೋಜನೆಯಡಿ ಅರ್ಜಿ ಆಹ್ವಾನ

Update: 2018-10-15 17:08 GMT

ಉಡುಪಿ, ಅ.15: ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 44ರ ಅನ್ವಯ ಮಕ್ಕಳನ್ನು ಪೋಷಕತ್ವ ಯೋಜನೆಯಡಿಯಲ್ಲಿ ಪಾಲನೆ ಹಾಗೂ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮಗುವಿಗೆ ಸಂಬಂಧವಿಲ್ಲದ ಕುಟುಂಬಕ್ಕೆ ತಾತ್ಕಾಲಿಕವಾಗಿ ಅಥವಾ ವಿಸ್ತರಿಸಲ್ಪಟ್ಟ ಒಂದು ವರ್ಷದ ಅವಧಿಗೆ ಮೀರದಂತೆ ಮಗುವನ್ನು ಪೋಷಕತ್ವ ಯೋಜನೆಯಡಿಯಲ್ಲಿ ನಿಯೋಜನೆ ಮಾಡಬಹುದಾಗಿದೆ.

ಮಗು ಹಾಗೂ ಕುಟುಂಬದ ಹೊಂದಾಣಿಕೆಯ ಆಧಾರದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿ, ಮಗುವನ್ನು 18 ವರ್ಷದ ವಯಸ್ಸಿನವರೆಗೂ ಪೋಷಕತ್ವ ಮುಂದುರಿಸಲು ಅವಕಾಶ ಕಲ್ಪಿಸಬಹುದಾಗಿದೆ.

ಪ್ರತಿಯೊಂದು ಮಗುವಿಗೂ ಕುಟುಂಬದ ವಾತಾವರಣದಲ್ಲಿ ಬೆಳೆಯುವ ಹಕ್ಕಿದ್ದು, ವಿವಿಧ ಕಾರಣಗಳಿಂದ ಕೆಲವು ಮಕ್ಕಳನ್ನು ಸರಕಾರಿ, ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲು ಮಾಡುವ ಅನಿವಾರ್ಯತೆ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಮಗುವನ್ನು ಮಗುವಿನ ಸ್ವಂತ ಕುಟುಂಬದಲ್ಲಿ ಇರಿಸಲು ಸಾಧ್ಯವಾಗದಿದ್ದಾಗ ಅಂತಹ ಮಕ್ಕಳಿಗೆ ಪೋಷಕತ್ವ ಯೋಜನೆಯಡಿಯಲ್ಲಿ ಇತರೆ ಕುಟುಂಬದಲ್ಲಿ ಬೆಳೆಯಲು ಮಗುವಿನ ಹಿತದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿ ತೀರ್ಮಾನವನ್ನು ತೆಗೆದುಕೊಳ್ಳಬಹುದಾಗಿದೆ.

ಈ ಹಿನ್ನೆಲೆಯಲ್ಲಿ 6ರಿಂದ 18 ವರ್ಷದೊಳಗಿನ ವಿವಿಧ ಕಾರಣಗಳಿಗೆ ಉಡುಪಿ ಜಿಲ್ಲೆಯ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಯಲ್ಲಿ ದಾಖಲಾಗಿರುವ ಮಕ್ಕಳನ್ನು ಪೋಷಕತ್ವ ಯೋಜನೆ ಯಡಿಯಲ್ಲಿ ನೋಡಿಕೊಳ್ಳಲು ಆಸಕ್ತಿ ಇರುವ ಪೋಷಕರು ನಿಗದಿತ ನಮೂನೆ ಯಲ್ಲಿ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ರಜತಾದ್ರಿ, ಮಣಿಪಾಲ, ಉಡುಪಿ, (ದೂರವಾಣಿ ಸಂಖ್ಯೆ: 0820- 2574964)ಕ್ಕೆ ಸಲ್ಲಿಸಬಹುದಾಗಿದೆ ಎಂದು ಉಡುಪಿಯ ಜಿಲ್ಲಾ ಮಕ್ಕಳ ರ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News