ಕರ್ನಾಟಕ ಸಕಾಲ ಯೋಜನೆಯಲ್ಲಿ 897 ಸೇವೆಗಳು: ಮಥಾಯಿ

Update: 2018-10-15 17:13 GMT

ಮಣಿಪಾಲ, ಅ.15: ಕರ್ನಾಟಕದ ಸಕಾಲ ಯೋಜನೆಯಡಿ ಈಗ ಒಟ್ಟು 897 ಯೋಜನೆಗಳು ಸೇರಿದ್ದು, ಇದು ದೇಶ-ವಿದೇಶಗಳಲ್ಲಿ ಎಲ್ಲರ ಗಮನವನ್ನು ಸೆಳೆದಿದೆ ಎಂದು ಕರ್ನಾಟಕ ಸಕಾಲ ಮಿಷನ್‌ನ ಆಡಳಿತಾಧಿಕಾರಿ ಕೆ.ಮಥಾಯಿ ಹೇಳಿದ್ದಾರೆ.

ಸಕಾಲ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಕಾಲ ಸೇವೆಗಳನ್ನು ಒದಗಿಸುತ್ತಿರುವ ಕಚೇರಿಗಳ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಇಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕರ್ನಾಟಕ 2011ರಲ್ಲಿ ಸಕಾಲ ಸೇವೆಯನ್ನು ಬಿಹಾರ ರಾಜ್ಯದಿಂದ ಸ್ಪೂರ್ತಿ ಪಡೆದು ಆರಂಭಿಸಿದ್ದು, ಅದರಲ್ಲಿ ಸಾಕಷ್ಟು ಸುಧಾರಣೆಯನ್ನು ಮಾಡಿಕೊಂಡಿತ್ತು. ಇಂದು ಕರ್ನಾಟಕದ ಸಕಾಲ ಸೇವೆ ದೇಶದ ಉಳಿದ ರಾಜ್ಯಗಳಿಗೆ ಮಾದರಿ ಎನಿಸಿಕೊಂಡಿದೆ. ಬಾಂಗ್ಲಾದೇಶ ಸರಕಾರ ಸಹ ಕರ್ನಾಟಕ ಮಾದರಿಯನ್ನೇ ಆಧಾರವಾಗಿಟ್ಟುಕೊಂಡು ಈ ಸೇವೆಯನ್ನು ಆದೇಶದ ಜನತೆಗೆ ನೀಡುತ್ತಿದೆ ಎಂದು ಮಥಾಯ್ ನುಡಿದರು.

ಸಕಾಲದಡಿ ನೀಡುವ ಎಲ್ಲಾ ಸೇವೆಗಳಿಗೂ ನಿರ್ದಿಷ್ಟ ಕಾಲಾವಧಿಯನ್ನು ಗೊತ್ತು ಪಡಿಸಲಾಗಿದೆ. ಯಾವುದೇ ಸೇವೆಯನ್ನು ಆ ಅವಧಿಯೊಳಗೆ ನೀಡದಿದ್ದರೆ ಸಂಬಂಧಿತ ಅಧಿಕಾರಿಗೆ ದಂಡ ವಿಧಿಸುವ ಅವಕಾಶವಿದೆ. ದಿನದ ಆಧಾರದಲ್ಲಿ ಈ ದಂಡ ಅರ್ಜಿದಾರರಿಗೆ ನೀಡಬೇಕಾಗಿದೆ. ಅದೇ ರೀತಿ ಸಕಾಲದ ಮೇಲಿನ ಹಂತದ ಅಧಿಕಾರಿಗಳಾದ ಉಪವಿಭಾಗಾಧಿಕಾರಿ, ಜಿಲ್ಲಾಧಿಕಾರಿಗಳೂ ನಿರ್ದಿಷ್ಟ ಅವಧಿಯಲ್ಲಿ ಸೇವೆ ನೀಡದಿದ್ದರೆ ಅವರೂ ದಂಡ ತೆರಬೇಕಾಗುತ್ತದೆ ಎಂದರು.

ಜನರು ಸರಕಾರದ ಯಾವುದೇ ಸೇವೆಗಾಗಿ ಅರ್ಜಿಯನ್ನು ಗ್ರಾಪಂ ಮಟ್ಟದಲ್ಲಿ ಇರುವ ಸಕಾಲ ಕೌಂಟರ್‌ನಲ್ಲೇ ನೀಡಿದರೆ, ಅವರಿಗೆ ನಿಗದಿ ಪಡಿಸಿದ ಸಮಯದೊಳಗೆ ಈ ಸೇವೆಯನ್ನು ಒದಗಿಸುವುದು ಅಧಿಕಾರಿಗೆ ಕಡ್ಡಾಯ ವೆನಿಸಿದೆ ಎಂದವರು ವಿವರಿಸಿದರು.

ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಸಾರ್ವಜನಿಕರಿಗೆ ವಿವಿಧ ಇಲಾಖೆಗಳ ಸೇವೆಯಲ್ಲಿ ಅನಗತ್ಯ ವಿಳಂಬವಾಗು ತ್ತಿರುವುದನ್ನು ಗಮನಿಸಿ ಸಕಾಲ ಸೇವೆಯನ್ನು 2011ರಲ್ಲಿ ಜಾರಿಗೊಳಿಸಲಾಗಿತ್ತು. ಜಿಲ್ಲೆಯಲ್ಲಿ 768 ಸೇವೆಗಳು ಇದರಡಿ ಸೇರಿವೆ. ಯಾವುದೇ ಸೇವೆಯಲ್ಲಿ ವಿಳಂಬವಾದರೆ ಅದಕ್ಕೆ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದರು. ಇದನ್ನು ಜಿಲ್ಲೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಿರ್ಧರಿಸಲಾಗಿದೆ ಎಂದರು.

ಉಡುಪಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ನಾಗೇಶ ರಾಯ್ಕರ್ ಮಾತನಾಡಿ, ಉಡುಪಿ ಜಿಲ್ಲೆ ಸಕಾಲ ಸೇವೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು. ಎಲ್ಲಾ ಗ್ರಾಪಂಗಳ ಪಿಡಿಓಗಳಿಗೆ ಸಕಾಲದಡಿಯಲ್ಲೇ ಎಲ್ಲಾ ಸೇವೆಗಳನ್ನು ಒದಗಿಸುವಂತೆ ತಿಳಿಸಲಾಗಿದೆ ಎಂದರು.ಆದುದರಿಂದ ಜನರು ಗ್ರಾಪಂ, ತಾಲೂಕು ಕಚೇರಿ ಹಾಗೂ ಜಿಲ್ಲಾ ಕಚೇರಿಗಳಿಂದ ಯಾವುದೇ ಕೆಲಸಕ್ಕೂ ಸಕಾಲ ಕೌಂಟರನ್ನೇ ಸಂಪರ್ಕಿಸಿ, ಮಧ್ಯವರ್ತಿಗಳ ಸಹಾಯ ಪಡೆಯಬೇಡಿ ಎಂದವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಕಾಲ ಸೇವೆಗಳನ್ನು ಒದಗಿಸುತ್ತಿರುವ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News