ಸೂಕ್ತ ಕ್ರಮಕ್ಕೆ ಒತ್ತಾಯಿಸಿ ಮುಸ್ಲಿಂ ನಿಯೋಗದಿಂದ ಪೊಲೀಸ್ ಆಯುಕ್ತರಿಗೆ ಮನವಿ

Update: 2018-10-16 12:51 GMT

ಮಂಗಳೂರು, ಅ.16: ಕುದ್ರೋಳಿಯ ಬ್ಯಾರಿಗಳು ಭಯೋತ್ಪಾದಕರು, ಕುದ್ರೋಳಿ ಪ್ರದೇಶವೇ ಭಯೋತ್ಪಾದನಾ ಕೇಂದ್ರ. ಹಿಂದೂ ಸಮಾಜ ಎದ್ದು ನಿಂತರೆ ಮುಸ್ಲಿಮರು ಎಲ್ಲಿ ಹೋಗಬಹುದು ಎಂದು ಗೊತ್ತಾಗಲಿಕ್ಕಿಲ್ಲ... ಇತ್ಯಾದಿಯಾಗಿ ವಿಶ್ವ ಹಿಂದೂ ಪರಿಷತ್, ಭಜರಂಗ ದಳದ ಮುಖಂಡ ಜಗದೀಶ್ ಶೇಣವ ಕೋಮು ಪ್ರಚೋದಕ ಭಾಷಣಗೈದು ಕುದ್ರೋಳಿಯ ಮುಸ್ಲಿಮರನ್ನು ಅವಹೇಳನಗೈದಿದ್ದಾರೆ. ಹಾಗಾಗಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಮುಸ್ಲಿಂ ಸೌಹಾರ್ದ ವೇದಿಕೆಯ ನಿಯೋಗವೊಂದು ಮಂಗಳವಾರ ಮಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಅ.12ರಂದು ಮಂಗಳೂರು ಮಹಾನಗರ ಪಾಲಿಕೆಯ ಮುಂದೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್‌ರ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಶೇಣವ ಭಾಷಣ ಮಾಡಿದ ಕೋಮುಪ್ರಚೋದಕ ಭಾಷಣದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಹಿಂದೆ ದ.ಕ.ಜಿಲ್ಲೆಯಲ್ಲಿ ಗಲಾಟೆ ಎಬ್ಬಿಸಿ ಕರ್ಫ್ಯೂ ಹಾಕಿಸಿ ಸರಕಾರಕ್ಕೆ ನೂರಾರು ಕೋ.ರೂ. ನಷ್ಟ ಉಂಟು ಮಾಡಿದ್ದೇವೆ. ಅದೇ ರೀತಿ ಮುಂದೆಯೂ ಮಾಡುತ್ತೇವೆ ಎಂದೂ ಹೇಳಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ವೇದಿಕೆ ಒತ್ತಾಯಿಸಿದೆ.

ಜಗದೀಶ್ ಶೇಣವರ ಭಾಷಣದಿಂದ ದ.ಕ. ಮತ್ತು ಆಸುಪಾಸಿನಲ್ಲಿ ಕೋಮುಸಂಘರ್ಷ ಉಂಟಾಗುವ ಅಪಾಯವಿದೆ. ಹಾಗಾಗಿ ಜಗದೀಶ್ ಶೇಣವ ಮತ್ತು ಪ್ರತಿಭಟನಾ ಸಭೆ ಸಂಘಟಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಬೇಕು. ಕುದ್ರೋಳಿ ಕಸಾಯಿಖಾನೆಗೆ ಡಿಸಿಪಿ ಕೂಡಾ ಹೋಗಲು ಹೆದರುತ್ತಿದ್ದಾರೆ ಎಂದು ಜಗದೀಶ್ ಶೇಣವ ಭಾಷಣದಲ್ಲಿ ಹೇಳಿದ್ದರು. ಡಿಸಿಪಿಯವರು ಸರಕಾರಿ ವಾಹನದಲ್ಲಿ ಹೋದದ್ದೋ ಅಥಾ ಜಗದೀಶ್ ಶೇಣವರ ಕಾರಿನಲ್ಲಿ ಹೋದದ್ದೋ ಎಂದು ಸ್ಪಷ್ಪಪಡಿಸಬೇಕು. ಜಗದೀಶ್ ಶೇಣವರಿಗೆ ಪೊಲೀಸ್ ಇಲಾಖೆಯು ಭದ್ರತೆ ಒದಗಿಸಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯನ್ನು ಬಳಸಿಕೊಂಡು ಕಾನೂನುಬಾಹಿರ ಕೃತ್ಯ ನಡೆಸುತ್ತಿರುವುದು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯ ರಕ್ಷಣೆ ಪಡೆದ ವ್ಯಕ್ತಿ ಕಾನೂನು ಉಲ್ಲಂಘಿಸುತ್ತಿರುವುದು ವಿಪರ್ಯಾಸವಾಗಿದೆ. ಹಾಗಾಗಿ ಜಗದೀಶ್ ಶೇಣವರ ವಿರುದ್ಧ ಸೂಕ್ತ ಕ್ರಮ ಜರಗಿಸಬೇಕು ಎಂದು ವೇದಿಕೆ ಒತ್ತಾಯಿಸಿದೆ.

ನಿಯೋಗದಲ್ಲಿ ಕಾರ್ಪೊರೇಟರ್ ಅಬ್ದುಲ್ ಅಝೀಝ್, ಮುಖಂಡರಾದ ಅಲಿ ಹಸನ್, ರಫೀಉದ್ದೀನ್ ಕುದ್ರೋಳಿ, ನಾಸಿರುದ್ದೀನ್ ಹೈಕೋ, ಅಶ್ರಫ್ ಕಿನಾರ, ಯಾಸೀನ್ ಕುದ್ರೋಳಿ, ಲತೀಫ್, ಜೆ.ಎ.ಖಾದರ್, ಮುಸ್ತಾಕ್ ಅಲಿ, ಫಝಲ್ ಅಬೂಬಕರ್, ಮುಝೈನ್, ಸಿ.ಎಂ.ಮುಸ್ತಫಾ, ಮಖ್ಬೂಲ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News