ಉಳ್ಳಾಲ: ಗೋಮಾಂಸ ರಫ್ತು ನಿಲ್ಲಿಸಲು ಕಾಂಗ್ರೆಸ್ ಒತ್ತಾಯ

Update: 2018-10-16 13:08 GMT

ಉಳ್ಳಾಲ, ಅ.16: ಪ್ರಪಂಚದಲ್ಲಿ ಅತಿ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ರಫ್ತು ಮಾಡುವ ಸಂಸ್ಥೆಗಳ ಪೈಕಿ ಶೇ.70 ಸಂಸ್ಥೆಗಳು ಬಹುಸಂಖ್ಯಾತರದ್ದೇ ಆಗಿದೆ. ಅದರ ಬಗ್ಗೆ ಚಕಾರ ಎತ್ತದ ಬಿಜೆಪಿಯು ಚುನಾವಣೆ ಸಂದರ್ಭ ರಾಜಕೀಯ ಹುನ್ನಾರ ನಡೆಸುತ್ತಿದೆ. ಗೋವಿನ ಬಗ್ಗೆ ಬಿಜೆಪಿಗೆ ಅಷ್ಟೊಂದು ಪ್ರೀತಿ ಇದ್ದರೆ ಕೇಂದ್ರದಲ್ಲಿ ಅಧಿಕಾರ ಹೊಂದಿರುವ ಬಿಜೆಪಿ ನಾಯಕರೇ ಮೊದಲು ಗೋಮಾಂಸ ರಫ್ತು ನಿಲ್ಲಿಸಲಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಹೇಳಿದರು.

ತೊಕ್ಕೊಟ್ಟಿನಲ್ಲಿರುವ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಗೆ ಸ್ವಚ್ಛತೆಯೂ ಮುಖ್ಯ. ಈ ಯೋಜನೆಯಡಿ ಶೇ.50 ರಾಜ್ಯ ಸರಕಾರದ ಅನುದಾನವೂ ಇದ್ದು, ಯೋಜನೆ ರೂಪಿಸಲು ಸಮಿತಿಯೂ ಇದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಕಸಾಯಿ ಖಾನೆಯಲ್ಲಿ ಆಡು, ಕುರಿ, ಕೋಳಿ ಮಾಂಸವೂ ಮಾರಲಾಗುತ್ತದೆ. ವೈದ್ಯರು, ತ್ಯಾಜ್ಯ ವಿಲೇವಾರಿ ವ್ಯವಸ್ಥೆ, ಚರಂಡಿ, ಶೆಡ್ ವ್ಯವಸ್ಥೆಯೂ ಕಸಾಯಿಖಾನೆಯಲ್ಲಿ ಅಗತ್ಯ. ಈ ನಿಟ್ಟಿನಲ್ಲಿ ಯೋಜನೆಯಡಿ 15 ಕೋ.ರೂ. ಅನುದಾನ ಮೀಸಲಿಡುವಂತೆ ಸಚಿವ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ. ಆ ಸಂದರ್ಭ ಮೌನವಾಗಿದ್ದ ಬಿಜೆಪಿ ಮತ್ತು ಸಂಘ ಪರಿವಾರವು ಇದೀಗ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕೋಸ್ಕರ ಬಿಜೆಪಿ ವ್ಯರ್ಥ ಆರೋಪ ಮಾಡುತ್ತಿದೆ ಎಂದು ಆರೋಪಿಸಿದರು.

ಸಂಘಪರಿವಾರ ಮುಖಂಡರೊಬ್ಬರು ಯು.ಟಿ.ಖಾದರ್ ಆರೋಗ್ಯ ಏರುಪೇರಾಗಿರುವುದನ್ನೇ ಬಂಡವಾಳವನ್ನಾಗಿಸಿ ಆಸ್ಪತ್ರೆಯಲ್ಲಿ ನರಳಬೇಕು, ಹೋಮದಿಂದ ಸರಿಯಾಗಬೇಕು ಎಂದು ಅಮಾನವೀಯತೆಯಿಂದ ಮಾತನಾಡುತ್ತಾರೆ. ರಾಜ್ಯದ ಜನತೆಗೆ ಯು.ಟಿ. ಖಾದರ್ ಅವರ ಕುರಿತು ಹೇಳಬೇಕಿಲ್ಲ. ಸುಳ್ಳು ಆರೋಪಕ್ಕೆ ಕ್ಷೇತ್ರದ ಜನರು ಮಣೆ ಹಾಕಲಾರರು ಎಂದು ಸಂತೋಷ್ ಶೆಟ್ಟಿ ತಿರುಗೇಟು ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮುಹಮ್ಮದ್ ಮುಸ್ತಫಾ ಮಲಾರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಕೋಡಿಜಾಲ್, ಪದಾಧಿಕಾರಿಗಳಾದ ಇಕ್ಬಾಲ್ ಸಾಮಣಿಗೆ, ಉಮರ್ ಪಜೀರ್, ತಾಪಂ ಸದಸ್ಯೆ ಸುರೇಖಾ ಚಂದ್ರಹಾಸ್, ಆಲ್ವಿನ್ ಡಿಸೋಜ, ದಿನೇಶ್ ರೈ ಹಾಗೂ ಕಿಶೋರ್ ಗಟ್ಟಿ ಸೋಮೇಶ್ವರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News