ಮರಳುಗಾರಿಕೆ: ಕಟಾರಿಯಾರೊಂದಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಚರ್ಚೆ
ಉಡುಪಿ, ಅ.16: ಜಿಲ್ಲೆಯಲ್ಲಿ ಸಿಆರ್‌ಝಡ್ ಹಾಗೂ ನಾನ್‌ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಸಂಬಂಧಿಸಿದಂತೆ ಉದ್ಭವಿಸಿರುವ ಸಮಸ್ಯೆಯ ಕುರಿತು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಇಂದು ವಾಣಿಜ್ಯ ಮತ್ತು ಉದ್ದಿಮೆ ಇಲಾಖೆಯ (ಗಣಿ ಮತ್ತು ಎಂಎಸ್‌ಎಂಇ) ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾ ಅವರೊಂದಿಗೆ ಚರ್ಚಿಸಿದರು.
ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಕೇವಲ ಕಾರ್ಕಳದ ಎರಡು ಬ್ಲಾಕ್‌ಗಳಲ್ಲಿ ಮಾತ್ರ ಮರಳುಗಾರಿಕೆ ನಡೆಯಲಿದ್ದು, ಉಳಿದಂತೆ ಕಡಿಮೆ ವಿಸ್ತೀರ್ಣದ ಪ್ರದೇಶಗಳಲ್ಲೂ ಮರಳುಗಾರಿಕೆಗೆ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳು ಕಟಾರಿಯಾ ಅವರಲ್ಲಿ ಮನವಿ ಮಾಡಿದರು.
ಕೂಡಲೇ ಈ ಕುರಿತು ಪ್ರಸ್ತಾವನೆ ಕಳುಹಿಸುವಂತೆ ಕಟಾರಿಯಾ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಇದಕ್ಕೆ ಅನುಮತಿ ನೀಡಿದರೆ, ಇನ್ನೂ 10 ಬ್ಲಾಕ್‌ಗಳಲ್ಲಿ (ಸಿಹಿನೀರಿನ) ಮರಳುಗಾರಿಕೆ ನಡೆಸಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಿಆರ್‌ಝಡ್ ಪ್ರದೇಶ ವ್ಯಾಪ್ತಿಯ ಮರಳುಗಾರಿಕೆಗೆ ಸಂಬಂಧಿಸಿದಂತೆ ತಾಲೂಕಿನಲ್ಲಿ ಸರ್ವೆ ನಡೆಸಿ ಎನ್‌ಐಟಿಕೆ ತಂಡ 9 ಮರಳು ದಿಬ್ಬಗಳನ್ನು ಗುರುತಿಸಿ ನೀಡಿದ ತಾಂತ್ರಿಕ ವರದಿಯನ್ನು ಜಿಲ್ಲೆಯ 7 ಸದಸ್ಯರ ಮರಳು ಸಮಿತಿ ಸಭೆಯಲ್ಲಿ ಚರ್ಚಿಸಿ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಕರ್ನಾಟಕ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ (ಕೆಎಸ್‌ಸಿಝಡ್‌ಎಂಎ)ಕ್ಕೆ ಕಳುಹಿಸಿರುವುದನ್ನು ಅವರ ಗಮನಕ್ಕೆ ತಂದಿದ್ದು, ಈ ಬಗ್ಗೆ ಸಂಬಂಧಿತರೊಂದಿಗೆ ಮಾತನಾ ಡುವುದಾಗಿ ತಿಳಿಸಿದರೆಂದು ಜಿಲ್ಲಾಧಿಕಾರಿ ನುಡಿದರು.
ಕೆಎಸ್‌ಸಿಝಡ್‌ಎಂಎಯಿಂದ ಪ್ರಸ್ತಾವನೆ ಅನುಮೋದನೆಗೊಂಡು ಬಂದ ಕೂಡಲೇ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆ ಪ್ರಾರಂಭಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪ್ರಿಯಾಂಕ ತಿಳಿಸಿದರು.