×
Ad

ಶಿವಮೊಗ್ಗ ಉಪಚುನಾವಣೆ ರಾಜಕೀಯದ ದಿಕ್ಕು ಬದಲಾಯಿಸಲಿದೆ: ಆಸ್ಕರ್ ಫೆರ್ನಾಂಡಿಸ್

Update: 2018-10-16 20:10 IST

ಉಡುಪಿ, ಅ.16: ಅನಿವಾರ್ಯವಾಗಿ ಶಿವಮೊಗ್ಗ ಲೋಕಸಭಾ ಚುನಾವಣೆ ನಮ್ಮ ಮುಂದಿದೆ. ಈ ಚುನಾವಣೆಯಲ್ಲಿ ಸಮ್ಮಿಶ್ರ ಸರಕಾರದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗ ಮಧು ಬಂಗಾರಪ್ಪ ಸ್ಪರ್ಧಿಸುತಿದ್ದಾರೆ. ಪರಂಪರಾಗತವಾಗಿರುವ ಕಾಂಗ್ರೆಸ್ ಮತಗಳನ್ನು ಕ್ರೋಡೀಕರಿ ಸಿದರೆ ಗೆಲುವು ನಮ್ಮದಾಗಬಹುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ನಡೆಯುವ ಉಪಚುನಾವಣೆಗೆ ಪೂರ್ವಭಾವಿಯಾಗಿ ಕಾಂಗ್ರೆಸ್ ಭವನದಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಅವರು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತಿದ್ದರು.

ಚುನಾವಣೆಯ ಗೆಲುವಿಗಾಗಿ ನಾವು ಸಂಘಟಿತ ಹೋರಾಟಕ್ಕೆ ಸಿದ್ದರಾ ಗೋಣ. ಉಡುಪಿ ಕಾಂಗ್ರೆಸ್ ಜಿಲ್ಲಾ ಸಮಿತಿ ಬೈಂದೂರನ್ನು ಕೇಂದ್ರೀಕರಿಸಿ ಕೊಳ್ಳಬೇಕು. ವಿಧಾನಸಭಾ ಚುನಾವಣೆಯ ಸೋಲನ್ನು ಸವಾಲಾಗಿ ಸ್ವೀಕರಿಸಿ ಬೂತ್ ಮಟ್ಟಕ್ಕೆ ಜಿಲ್ಲಾ ಸಮಿತಿಯಿಂದ ವೀಕ್ಷಕರನ್ನು ನೇಮಿಸಿ ಪ್ರತೀ ದಿನ ಚುನಾವಣೆಯ ಆಗು-ಹೋಗುಗಳನ್ನು ಅವಲೋಕಿಸಬೇಕು ಎಂದು.

ಯಾವುದೇ ಕಾರಣಕ್ಕೆ ಕ್ಷ್ಝೇತ್ರದ ಯಾವ ಮನೆಯೂ ನಮ್ಮ ಕಾರ್ಯಕರ್ತರ ಭೇಟಿಯಿಂದ ತಪ್ಪಿಹೋಗದಂತೆ ಯೋಜನೆಯನ್ನು ಹಾಕಿಕೊಳ್ಳಬೇಕು. ಹೀಗಾದಲ್ಲಿ ಚುನಾವಣೆಯ ಫಲಿತಾಂಶ ನಮ್ಮ ಪರವಾಗಿ ಖಂಡಿತ ಬರಲಿದೆ. ಈಗಿಂದೀಗಲೇ ಜಿಲ್ಲಾ ಸಮಿತಿ ಕಾರ್ಯತತ್ಪರರಾಗಬೇಕು. ಈ ಚುನಾವಣೆಯ ಗೆಲುವು ದೇಶದ ರಾಜಕೀಯದ ದಿಕ್ಕನ್ನೇ ಬದಲಾಯಿಸುತ್ತದೆ ಎಂದು ಆಸ್ಕರ್ ವಿಶ್ವಾಸ ವ್ಯಕ್ತಪಡಿಸಿದರು.

ಇದೊಂದು ಮಹತ್ವದ ಚುನಾವಣೆ. ಕೇಂದ್ರ ಸರಕಾರದ ವೈಫಲ್ಯತೆಯನ್ನು ಜನಮನಕ್ಕೆ ತಲುಪಿಸಿ ಈ ಚುನಾವಣಾ ಫಲಿತಾಂಶ ನಮ್ಮ ಪರವಾಗಿ ಬರು ವಂತೆ ನಾವು ಶ್ರಮಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ಯೋಜನೆಯನ್ನು ರೂಪಿಸಬೇಕು. ಸಮ್ಮಿಶ್ರ ಸರಕಾರದ ಅಭ್ಯರ್ಥಿಯ ಗೆಲುವು ಕರ್ನಾಟಕದ ಲೋಕಸಭಾ ಚುನಾವಣೆಗೆ ಶುಭ ನಾಂದಿಯಾಗಲಿ ಎಂದು ಹಾರೈಸಿದರು.

ದುರುದ್ದೇಶದಿಂದ ಈ ಚುನಾವಣೆ ಘೋಷಣೆಯಾಗಿದೆ ಎಂಬ ಶಂಕೆ ಜನಮನದಲ್ಲಿದೆ. ಅಕ್ರಮಗಳ ಮೂಲಕ ಈ ಚುನಾವಣೆಯನ್ನು ಗೆದ್ದು 2019ರ ಲೋಕಸಭಾ ಚುನಾವಣೆಗೆ ಇದು ಜನಾಭಿಪ್ರಾಯ ಎಂದು ಪ್ರಚಾರ ಮಾಡುವ ಬಿಜೆಪಿಯ ಹುನ್ನಾರ ಕಾಣುತ್ತಿದೆ. ನಾವು ಸಂಘಟಿತವಾಗಿ ಹೋರಾಟ ನಡೆಸುವ ಮೂಲಕ ಈ ಹುನ್ನಾರವನ್ನು ವಿಫಲಗೊಳಿಸೋಣ ಎಂದು ಮಾಜಿ ಸಚಿವ ವಿಯ ಕುಮಾರ್ ಸೊರಕೆ ನುಡಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕ ಗೊಪಾಲ ಭಂಡಾರಿ, ಕೆಪಿಸಿಸಿಯಿಂದ ನೇಮಿಸಲ್ಪಟ್ಟ ಬೈಂದೂರು ಕ್ಷೇತ್ರದ ಉಸ್ತುವಾರಿ ಎಂ.ಎಸ್.ಮಹಮ್ಮದ್, ಕೆಎಂಡಿಸಿ ಮಾಜಿ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿದರು. ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜನಾರ್ದನ ತೋನ್ಸೆ ವಹಿಸಿದ್ದರು.

ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಇಂದ್ರಾಳಿ ಮುರುಳಿ ಶೆಟ್ಟಿ, ವೆರೋನಿಕಾ ಕರ್ನೇಲಿಯೋ, ರಾಜಶೇಖರ್ ಕೋಟ್ಯಾನ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಬ್ಲಾಕ್ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿ ಕುಂದಾಪುರ, ಸತೀಶ್ ಅಮೀನ್ ಪಡುಕರೆ ಉಡುಪಿ, ನವೀನ್‌ಚಂದ್ರ ಶೆಟ್ಟಿ ಕಾಪು, ನೀರೆಕೃಷ್ಣ ಶೆಟ್ಟಿ ಹೆಬ್ರಿ, ಸುಧಾಕರ ಕೋಟ್ಯಾನ್ ಕಾರ್ಕಳ, ಮದನ್ ಕುಮಾರ್ ಬೈಂದೂರು ಹಾಗೂ ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News