ಮೀ ಟೂ: ಬಾಲಿವುಡ್‌ನ ಇನ್ನಿಬ್ಬರ ವಿರುದ್ಧ ಲೈಂಗಿಕ ಕಿರುಕುಳ ಆರೋಪ

Update: 2018-10-16 14:56 GMT

ಮುಂಬೈ,ಅ.16: ತನ್ನ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಬಾಲಿವುಡ್‌ನ ಪ್ರತಿಭಾ ಸಂಸ್ಥೆ ಕ್ವಾನ್ ಎಂಟರ್ಟೈನ್ಮೆಂಟ್ (ಕೆಡಬ್ಲುಎಎನ್)ನ ಸಂಸ್ಥಾಪಕ ಅನಿರ್ಬನ್ ಬ್ಲಾ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಕ್ವಾನ್‌ನಲ್ಲಿ ಪ್ರತಿಭಾ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಬ್ಲಾ ವಿರುದ್ಧ ನಾಲ್ಕು ಮಹಿಳೆಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿತ್ತು.

“ಸಂದರ್ಶನಕ್ಕೆ ಕರೆದ ಅನಿರ್ಬನ್ ಬ್ಲಾ ನನ್ನನ್ನು ಬಟ್ಟೆ ಬಿಚ್ಚುವಂತೆ ತಿಳಿಸಿದ್ದರು” ಎಂದು ಓರ್ವ ಮಹಿಳೆ ಆರೋಪಿಸಿದ್ದರೆ, ಕಾಫಿ ಶಾಪ್‌ನಲ್ಲಿ ಮಾತನಾಡಲು ಕರೆದು ನಂತರ ತನ್ನ ಹೋಟೆಲ್ ಕೋಣೆಯ ನಂಬರ್ ನೀಡಿದ್ದ ಬ್ಲಾ ಸಿನೆಮಾಗಳಿಗೆ ಆಯ್ಕೆ ಬೆಡ್‌ರೂಂಗಳಲ್ಲಿ ನಡೆಯುತ್ತವೆ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲ ಎಂದು ತಿಳಿಸಿದ್ದರು ಎಂದು ಇನ್ನೋರ್ವ ಮಹಿಳೆ ಆರೋಪಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿತ್ತು. ಇದೇ ರೀತಿ ಇನ್ನಿಬ್ಬರು ಮಹಿಳೆಯರ ಜೊತೆಯೂ ಬ್ಲಾ ಅನುಚಿತವಾಗಿ ವರ್ತಿಸಿದ್ದಾರೆ ಮಾತ್ರವಲ್ಲದೆ ಒಬ್ಬಾಕೆಗೆ ಕೆಲಸ ಸಿಗದಂತೆ ಮಾಡಿದ್ದಾರೆ ಎಂದು ವರದಿಯಲ್ಲಿ ಆರೋಪಿಸಲಾಗಿತ್ತು.

ಇನ್ನೊಂದೆಡೆ ಯಶ್‌ರಾಜ್ ಫಿಲ್ಮ್ಸ್‌ನಲ್ಲಿ ಪ್ರಮುಖ ಹುದ್ದೆಯಲ್ಲಿರುವ ಆಶಿಶ್ ಪಾಟೀಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಸಂಸ್ಥೆಯಿಂದ ಹೊರಕಳುಹಿಸಲಾಗಿದೆ. ಯಶ್‌ರಾಜ್ ಫಿಲ್ಮ್ಸ್‌ನಲ್ಲಿ ಬ್ರಾಂಡ್ ಪಾರ್ಟ್‌ನರ್‌ಶಿಪ್ ಮತ್ತು ಟ್ಯಾಲೆಂಟ್ ಮ್ಯಾನೆಜ್ಮೆಂಟ್‌ನ ಕ್ರಿಯೇಟಿವ್ ಹೆಡ್ ಆಗಿ ಪಾಟೀಲ್ ಕಾರ್ಯನಿರ್ವಹಿಸುತ್ತಿದ್ದರು. ಚಿತ್ರದಲ್ಲಿ ನಟಿಸುವ ಅವಕಾಶವನ್ನು ಕೊಡಿಸುವುದಾಗಿ ಭರವಸೆ ನೀಡಿ ಅದರ ಬದಲಾಗಿ ಲೈಂಗಿಕ ಸುಖ ನೀಡುವಂತೆ ತಿಳಿಸಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ಆಶಿಶ್ ಪಾಟೀಲ್ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಯಶ್‌ರಾಜ್ ಸಂಸ್ಥೆಯು ತನಿಖಾ ತಂಡವನ್ನು ರಚಿಸಿದ್ದು ಪಾಟೀಲ್‌ರನ್ನು ಸಂಸ್ಥೆಯ ಜವಾಬ್ದಾರಿಯಿಂದ ಕೈಬಿಟ್ಟಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News