ಬೆಳಪುವಿನಲ್ಲಿ ಕೆಸಿಸಿ ಆರೋಗ್ಯ ಕಾರ್ಡ್‍ಗೆ ತಡೆ

Update: 2018-10-16 14:58 GMT

ಪಡುಬಿದ್ರಿ, ಅ. 16: ಆರೋಗ್ಯ ಕಾರ್ಡ್ ಹೆಸರಿನಲ್ಲಿ ಬೆಳಪುವಿನಲ್ಲಿ ಜನರಿಂದ ಹಣ ಸಂಗ್ರಹಿಸುತಿದ್ದ ಖಾಸಗಿ ಸಂಸ್ಥೆಯ ಅಸಲಿಯತ್ತು ಬೆಳಕಿಗೆ ಬರುತಿದ್ದಂತೆ ನೋಂದಣೆ ಮಾಡುವುದನ್ನು ತಡೆಹಿಡಿದ ಘಟನೆ ಮಂಗಳವಾರ ನಡೆದಿದೆ.

ಮಂಗಳೂರಿನ ದೇರಳಕಟ್ಟೆಯ ವಿಳಾಸ ಹೊಂದಿರುವ ಕೆಸಿಸಿ ಆರೋಗ್ಯ ಕಾರ್ಡ್‍ನಿಂದ ಮಂಗಳೂರು, ಉಡುಪಿ ಕಾರ್ಕಳ, ತೀರ್ಥಹಳ್ಳಿ ಮತ್ತು ಶಿವಮೊಗ್ಗದ ಪ್ರತಿಷ್ಠಿತ ಆಸ್ಪತ್ರೆಗಳು ಅಲ್ಲದೆ ಕೇರಳ ರಾಜ್ಯದ ಆಸ್ಪತ್ರೆಯಲ್ಲೀ ಉಚಿತ, ರಿಯಾಯಿತಿ ದರದಲ್ಲಿ ಚಿಕಿತ್ಸೆ, ಹೊರರೋಗಿ, ಒಳರೋಗಿ ದಾಖಲಾತಿಗೂ ಅನ್ವಯ ವಾಗುತ್ತದೆ ಎಂದು ಕರಪತ್ರದಲ್ಲಿ ತಿಳಿಸಲಾಗಿತ್ತು. ಅದರಂತೆ ಬೆಳಪು ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ಮತ್ತು ಬುಧವಾರ ಕೆಸಿಸಿ ಆರೋಗ್ಯ ಕಾರ್ಡ್ ಶಿಬಿರ ಬೆಳಪು ಪಂಚಾಯತ್ ಹಾಗೂ ಅಂಗನವಾಡಿ ಕೇಂದ್ರ ಪಣಿಯೂರಿನಲ್ಲಿ ಆಯೋಜಿಸಲಾಗಿತ್ತು. 

ಈ ಕಾರ್ಡ್ ಬಗ್ಗೆ ಅನುಮಾನಗೊಂಡ ಬೆಳಪು ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ನೋಂದಣಿ ಮಾಡುತ್ತಿದ್ದ ಸಿಬ್ಬಂದಿಯಲ್ಲಿ ವಿಚಾರಿಸಿದಾಗ ಅಸಮರ್ಪಕ ಉತ್ತರಿಸಿದರು. ಬಳಿಕ ಕರಪತ್ರದಲ್ಲಿರುವ ಆಸ್ಪತ್ರೆಗಳನ್ನು ಸಂಪರ್ಕಿಸಿ ಕೆಸಿಸಿ ಆರೋಗ್ಯ ಕಾರ್ಡ್ ಬಗ್ಗೆ ಒಡಂಬಡಿಕೆ ಇಲ್ಲದಿರುವುದನ್ನು ಖಚಿತ ಪಡಿಸಿದರು. ತಕ್ಷಣ ಪಂಚಾಯಿತಿಯಲ್ಲಿ ನೋಂದಣಿ ಮಾಡುತ್ತಿದ್ದ ಸಿಬ್ಬಂದಿಯಿಂದ ಹಣ ಹಾಗೂ ದಾಖಲಾತಿಗಳನ್ನು ಹಿಂದಕ್ಕೆ ಪಡೆದು ಫಲಾನುಭವಿಗಳಿಗೆ ಹಿಂತಿರುಗಿಸಿದರು.

ಕರಪತ್ರದಲ್ಲಿ ಸೂಚಿಸಿರುವ ತೀರ್ಥಹಳ್ಳಿ ಅನುರಾಧ ಆಸ್ಪತ್ರೆ ಹಾಗೂ ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ ಕೆಸಿಸಿ ಆರೋಗ್ಯ ಕಾರ್ಡ್‍ನ ಬಗ್ಗೆ ಯಾವುದೇ ಒಡಂಬಡಿಕೆ ಆಗದಿರುವ ಬಗ್ಗೆ ಅಲ್ಲಿನ ಸಿಬ್ಬಂದಿ  ಸ್ಪಷ್ಟಪಡಿಸಿದ್ದಾರೆ. ಕಾರ್ಡ್ ನೋಂದಣಿ ಮೂಲಕ ಜನರನ್ನು ವಂಚಿಸುವ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ದೇವಿಪ್ರಸಾದ್ ಮಾಹಿತಿ ನೀಡಿದರು.

ಪೂರ್ವಾಪರ ಮಾಹಿತಿ ಪಡೆಯದೆ ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಹಲವು ಪಂಚಾಯಿತಿಗಳಲ್ಲಿ ಈಗಾಗಲೇ ಕೆಸಿಸಿ ಆರೋಗ್ಯ ಕಾರ್ಡ್ ನೊಂದಣಿಯಿಂದ ಮೋಸಕ್ಕೊಳಗಾಗಿವೆ. ಇಂತಹ ಬೋಗಸ್ ಕಾರ್ಡ್‍ಗಳ ಬಗ್ಗೆ ಆರೋಗ್ಯ ಇಲಾಖೆ ತಕ್ಷಣ ತನಿಖೆ ನಡೆಸಬೇಕು ಶೆಟ್ಟಿ ಆಗ್ರಹಿಸಿದ್ದಾರೆ. 

ಪಡುಬಿದ್ರಿ ಪಂಚಾಯಿತಿ ಸಹಭಾಗಿತ್ವದಲ್ಲಿ ತಿಂಗಳ ಹಿಂದೆ ಆರೋಗ್ಯ ಕಾರ್ಡ್ ನೋಂದಣಿಯಾಗಿತ್ತು. ಇಲ್ಲಿ ಸಾವಿರಾರು ರೂಪಾಯಿ ಹಣ ಸಂಗ್ರಹಿಸಲಾಗಿತ್ತು. ಕಾರ್ಡ್ ನೋಂದಣಿ ಮಾಡಿದ ಜನರು ಅವರು ಸೂಚಿಸಿದ ಆಸ್ಪತ್ರೆಗಳಿಗೆ ಸಂಪರ್ಕಿಸಿದಾಗ ಕಾರ್ಡ್‍ನ ಒಡಂಬಡಿಕೆ ಆಗದಿರುವುದನ್ನು ತಿಳಿಸಿದ್ದರು. ಅದರಂತೆ ಜನ ಗ್ರಾಮ ಸಭೆಯಲ್ಲಿ ಪ್ರಶ್ನಿಸಿದ್ದರು.

ರಾಜ್ಯ ಸರ್ಕಾರದ ಆರೋಗ್ಯ ಕಾರ್ಡ್, ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್, ಮಣಿಪಾಲ ಹೆಲ್ತ್ ಕಾರ್ಡ್ ಹೊರತು ಇತರ ಯಾವ ಕಾರ್ಡ್‍ಗಳ ಬಗ್ಗೆ ಆರೋಗ್ಯ ಇಲಾಖೆ ಗಮನಕ್ಕೆ ಬಂದಿಲ್ಲ. ಇಂತಹ ನಕಲಿ ಕಾರ್ಡ್‍ಗಳ ಬಗ್ಗೆ ಜನ ಜಾಗೃತರಾಗಬೇಕು ಎಂದು ಉಡುಪಿ ಆರೋಗ್ಯಾಧಿಕಾರಿ ಡಾ. ರೋಹಿಣಿ, ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News