ಬಂಟ್ವಾಳ: ಅಕ್ರಮ ಮರಳುಗಾರಿಕೆ ಆರೋಪ; 12 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2018-10-16 15:05 GMT

ಬಂಟ್ವಾಳ, ಅ. 16: ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಎಂಬಲ್ಲಿ ಸೋಮವಾರ ತಡರಾತ್ರಿ ನಾಡದೋಣಿಗಳ ಸಹಾಯದಿಂದ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಟ್ವಾಳ ಎಎಸ್ಪಿ ಸೊನಾವಣೆ ಋಷಿಕೇಷ್ ಭಗವಾನ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿ ಸುಮಾರು 12 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ.

ಖಚಿತ ವರ್ತಮಾನದ ಹಿನ್ನೆಲೆಯಲ್ಲಿ ಬಂಟ್ವಾಳ ಎಎಸ್ಪಿ, ಗ್ರಾಮಾಂತರ ಠಾಣಾಧಿಕಾರಿ ನೇತೃತ್ವದ ತಂಡ ಸೋಮವಾರ ರಾತ್ರಿ 1 ಗಂಟೆಗೆ ದಾಳಿ ನಡೆಸಿದೆ. ಈ ವೇಳೆ 2 ನಾಡ ದೋಣಿಗಳ ಸಹಾಯದಿಂದ ಮರಳುಗಾರಿಕೆ ನಡೆಸಿ ದಡದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಮರಳನ್ನು ಲೋಡು ಮಾಡುತ್ತಿದ್ದು, ಪೊಲೀಸ್ ವಾಹನವನ್ನು ಕಂಡು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ಟಿಪ್ಪರ್ ಲಾರಿ, 2 ದೋಣಿಗಳು, ದೋಣಿ ಚಲಾಯಿಸಲು ಬಳಸುವ 2 ಪೆಟ್ರೋಲ್ ಇಂಜಿನ್ ಹಾಗೂ ಪ್ರತಿ ದೊಣಿಯಲ್ಲಿ ಸುಮಾರು 2 ಟಿಪ್ಪರ್ ಲೋಡಿನಷ್ಟು ಮರಳು ತುಂಬಿದ್ದು ಕಂಡು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಶಪಡಿಸಿಕೊಂಡ ಎಲ್ಲ ಸೊತ್ತುಗಳ ಒಟ್ಟು ಮೌಲ್ಯ 11,72,500 ರೂ. ಎಂದು ಅಂದಾಜಿಸಲಾಗಿದೆ. ವಶಪಡಿಸಿಕೊಂಡ ಮೇಲಿನ ಎಲ್ಲ ಸೊತ್ತುಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇ ಗೌಡ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News