ಬಿಜೈ ರಾಜ ಕೊಲೆ ಪ್ರಕರಣ: ಆರೋಪಿಗಳ ಖುಲಾಸೆ

Update: 2018-10-16 15:40 GMT

ಮಂಗಳೂರು, ಅ.16: ಆರು ವರ್ಷಗಳ ಹಿಂದೆ ನಡೆದ ಬಿಜೈ ರಾಜ ಅಲಿಯಾಸ್ ಶೈಲೇಶ್ ಕೊಲೆ ಪ್ರಕರಣದ ಆರೋಪಿಗಳು ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಪ್ರದೀಪ್ ಮೆಂಡನ್, ಚಂದು, ಅಚ್ಯುತ, ಸುಬ್ರಹ್ಮಣ್ಯ, ಭರತೇಶ್, ದೀಕ್ಷಿತ್, ಜೈಸನ್ ಡಿಸೋಜ, ಅವಿನಾಶ್, ನಿತೇಶ್‌ ಕುಮಾರ್, ವಿಜಯ್, ಸುಶಾಂತ್, ಮಹೇಶ್ ಕೋಡಿಕಲ್, ಗಣೇಶ್, ಚರಣ್ ಶೇಟ್, ವಿಕ್ಕಿ ಅವರನ್ನು ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ ಶಾರದಾ ಬಿ. ನಿರ್ದೋಷಿಗಳೆಂದು ತೀರ್ಪು ಪ್ರಕಟಿಸಿದರು.

2012ರ ಡಿ.1ರಂದು ರಾತ್ರಿ ಮಂಗಳೂರಿನ ಫಳ್ನೀರ್‌ನ ನ್ಯಾಷನಲ್ ಮೆಡಿಕಲ್ ಪಕ್ಕದಲ್ಲಿ ಬಿಜೈ ರಾಜ ಅಲಿಯಾಸ್ ಶೈಲೇಶ್‌ನನ್ನು ತಲವಾರಿನಿಂದ ಕಡಿದು ಗಂಭೀರ ಗಾಯಗೊಳಿಸಿ ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಭೂಗತ ಪಾತಕಿ ರವಿ ಪೂಜಾರಿ ಮತ್ತು ಕಲಿ ಯೋಗೀಶ್ ಸೇರಿದಂತೆ 16 ಮಂದಿ ಆರೋಪಿ ಗಳ ವಿರುದ್ಧ ಕದ್ರಿ ಠಾಣೆ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಪೊಲೀಸರು 53 ಜನರನ್ನು ಸಾಕ್ಷಿದಾರರನ್ನಾಗಿ ಮಾಡಿದ್ದರು. ನ್ಯಾಯಾಧೀಶರು 30 ಸಾಕ್ಷಿದಾರರ ವಿಚಾರಣೆ ನಡೆಸಿದ್ದರು. ಆದರೆ ಪ್ರಾಸಿಕ್ಯೂಷನ್ ಘಟನೆಯನ್ನು ಸಾಬೀತುಪಡಿಸಲು ವಿಫಲವಾದ ಹಿನ್ನೆಲೆ ಆರೋಪಿ ಗಳನ್ನು ಖುಲಾಸೆಗೊಳಿಸಿದ್ದಾರೆ.

ಪ್ರಕರಣದಲ್ಲಿ ಮೂವರು ಆರೋಪಿಗಳಾದ ಅವಿನಾಶ್, ಜೈಸನ್ ಹಾಗೂ ವಿಕ್ಕಿ ವಿಚಾರಣೆ ಮುಗಿಯುವ ಮೊದಲು ಸಾವಿಗೀಡಾಗಿದ್ದಾರೆ. ಭೂಗತದೊರೆ ರವಿ ಪೂಜಾರಿ ಹಾಗೂ ಕಲಿ ಯೋಗೀಶ್ ಇನ್ನೂ ಬಂಧನವಾಗಿಲ್ಲ. 2009ರಲ್ಲಿ ನಡೆದ ಪಾಂಡುರಂಗ ಪೈ ಅಲಿಯಸ್ ಪಾಂಡು ಪೈ ಕೊಲೆ ಪ್ರಕರಣದಲ್ಲಿ ಬಿಜೈ ರಾಜ ಆರೋಪಿಯಾಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News