ಅ. 21: ಪುತ್ತೂರಿನಲ್ಲಿ ತುಳು ಜಾನಪದ ಕ್ರೀಡಾಕೂಟ

Update: 2018-10-16 15:54 GMT

ಪುತ್ತೂರು, ಅ. 16: ಪುತ್ತೂರಿನ ಸುದಾನ ಶಾಲೆಯ ಮೈದಾನದಲ್ಲಿ ನ. 3ರಂದು ನಡೆಯುವ ತಾಲೂಕು ಮಟ್ಟದ ತುಳು ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿಯಾಗಿ ತಾಲೂಕು ಮಟ್ಟದ ತುಳು ಜಾನಪದ ಕ್ರೀಡಾಕೂಟವನ್ನು ಅ. 21ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಏರ್ಪಡಿಸಲಾಗಿದೆ ಎಂದು ಕ್ರೀಡಾ ಸಮಿತಿಯ ಸಂಚಾಲಕ ಪದ್ಮನಾಭ ಶೆಟ್ಟಿ ತಿಳಿಸಿದ್ದಾರೆ.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಸವಣೂರು ಸೀತಾರಾಮ ರೈ ಕ್ರೀಡಾಕೂಟದ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಉದ್ಘಾಟಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಪಿ.ಪಿ. ವರ್ಗೀಸ್, ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪುರುಷರು ಮತ್ತು ಮಹಿಳೆಯರಿಗೆ ಲಗೋರಿ, ಹಗ್ಗ ಜಗ್ಗಾಟ, ಪುರುಷರಿಗೆ ಕೊತ್ತಲಿಗೆ ಕ್ರಿಕೆಟ್, ವೈಯಕ್ತಿಕವಾಗಿ ಚೆನ್ನೆಮಣೆ ಆಟ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಮಹಿಳಾ ಹಿರಿಯ ನಾಗರಿಕರಿಗೆ ನಡಿಗೆ ಸ್ಪರ್ಧೆ ಏರ್ಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ಇದೇ ಕ್ರೀಡಾಂಗಣದಲ್ಲಿ ಪ್ರತ್ಯೇಕ ಕ್ರೀಡಾ ಕೂಟ ನಡೆಯಲಿದೆ.

ಪ್ರಾಥಮಿಕ ಶಾಲಾ ಹಂತದ ಹುಡುಗರಿಗೆ ಹಾಳೆ ಎಳೆಯುವುದು, ಟಯರ್ ತಿರುಗಿಸುವುದು, ಲಗೋರಿ, ಪ್ರಾಥಮಿಕ ಶಾಲಾ ಬಾಲಕಿಯರಿಗೆ ಕಲ್ಲಾಟ, ಜುಬಿಲಿ ಮತ್ತು ನಾಯಿಮೂಳೆ ಆಟ ಏರ್ಪಡಿಸಲಾಗಿದೆ. ಪ್ರೌಢಶಾಲಾ ವಿಭಾಗದ ಹುಡುಗರಿಗೆ ಟಯರ್ ತಿರುಗಿಸುವುದು, ಗೋಣಿ ಚೀಲ ಆಟ, ಲಗೋರಿ, ಪ್ರೌಢಶಾಲಾ ವಿಭಾಗದ ಹುಡುಗಿಯರಿಗೆ ಕಲ್ಲಾಟ, ಜುಬಿಲಿ, ನಾಯಿಮೂಳೆ ಆಟ ಏರ್ಪಡಿಸಲಾಗಿದೆ  ಎಂದರು.

ಸುದ್ದಿಗೋಷ್ಠಿಯಲ್ಲಿ ಕ್ರೀಡಾಕೂಟ ಸಮಿತಿಯ ಪ್ರಮುಖರಾದ ದಯಾನಂದ ರೈ ಕೋರ್ಮಂಡ, ರಾಮಣ್ಣ ರೈ ಕರ್ನೂರು, ಜಗನ್ನಾಥ ಶೆಟ್ಟಿ, ರಫೀಕ್ ದರ್ಬೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News