ಬಂದೂಕು ಹಿಡಿದು ತಿರುಗಿದ ಬಿಎಸ್‌ಪಿಯ ಮಾಜಿ ಸಂಸದರ ಪುತ್ರ

Update: 2018-10-16 16:20 GMT

ಹೊಸದಿಲ್ಲಿ, ಅ. 16: ದಕ್ಷಿಣ ದಿಲ್ಲಿಯ ಫೈಸ್ಟಾರ್ ಹೊಟೇಲ್ ಹೊರಗೆ ಬಿಎಸ್‌ಪಿಯ ಮಾಜಿ ಸಂಸದ ರಾಕೇಶ್ ಪಾಂಡೆ ಅವರ ಪುತ್ರ ಗನ್ ಹಿಡಿದುಕೊಂಡು ತಿರುಗುತ್ತಿರುವ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.

10 ಸೆಕೆಂಡ್‌ಗಳ ವೀಡಿಯೊ ವೈರಲ್ ಆಗಿದ್ದು, ಈ ವೀಡಿಯೊದಲ್ಲಿ ರಾಕೇಶ್ ಪಾಂಡೆ ಅವರ ಪುತ್ರ ಆಶಿಶ್ ಪಾಂಡೆ ಕಪ್ಪು ಟಿ ಶರ್ಟ್ ಹಾಗೂ ನಸುಗೆಂಪು ಬಣ್ಣದ ಪ್ಯಾಂಟ್ ಧರಿಸಿ ಕೈಯಲ್ಲಿ ಗನ್ ಹಿಡಿದುಕೊಂಡು ಕಾರ್ ಪಾರ್ಕಿಂಗ್ ವಿಷಯದ ಕುರಿತು ದಂಪತಿಯೊಂದಿಗೆ ವಾಗ್ವಾದ ನಡೆಸುತ್ತಿರುವುದು ದಾಖಲಾಗಿದೆ. ಅವರನ್ನು ಸಮಾಧಾನ ಪಡಿಸಲು ಗೆಳತಿ ಹಾಗೂ ಭದ್ರತಾ ಸಿಬ್ಬಂದಿ ಪ್ರಯತ್ನಿಸಿರುವುದು ಕೂಡ ವೀಡಿಯೊ ದೃಶ್ಯದಲ್ಲಿ ಇದೆ. ದಂಪತಿಯೊಂದಿಗೆ ವಾಗ್ವಾದ ನಡೆಸುತ್ತಿದ್ದಂತೆ ಹೊಟೇಲ್ ಸಿಬ್ಬಂದಿ ಆಶಿಶ್ ಅವರನ್ನು ಬದಿಗೆ ಕರೆದೊಯ್ಯುತ್ತಿರುವುದರೊಂದಿಗೆ ವೀಡಿಯೊ ಮುಗಿಯುತ್ತದೆ. ಈ ಘಟನೆ ಅಕ್ಟೋಬರ್ 14ರಂದು ನಡೆದಿದೆ. ಅನಂತರ ಈ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ದಿಲ್ಲಿ ಪೊಲೀಸರು ಆಶಿಶ್ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News