ಕೊಂಕಣ ರೈಲ್ವೆ ಲಾಭ ದುಪ್ಪಟ್ಟು: ಸಂಜಯ ಗುಪ್ತ

Update: 2018-10-16 17:16 GMT

ಉಡುಪಿ, ಅ.16: 2017-18ನೇ ಸಾಲಿನಲ್ಲಿ ಕೊಂಕಣ ರೈಲ್ವೆಯು ಒಟ್ಟು 126 ಕೋಟಿ ರೂ.ನಿವ್ವಳ ಲಾಭವನ್ನು ಗಳಿಸಿದೆ. ಇದು ಹಿಂದಿನ ವರ್ಷ ಗಳಿಸಿ ಲಾಭದ ದುಪ್ಪಟ್ಟು ಆಗಿದೆ ಎಂದು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ ಗುಪ್ತ ಹೇಳಿದ್ದಾರೆ.

ಸೋಮವಾರ ಮುಂಬಯಿಯಲ್ಲಿ ನಡೆದ ಕೊಂಕಣ ರೈಲ್ವೆಯ 28ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 2017-18ನೇ ಆರ್ಥಿಕ ಸಾಲಿನಲ್ಲಿ ಕೊಂಕಣ ರೈಲ್ವೆಯ ಒಟ್ಟು ವ್ಯವಹಾರ 2483 ಕೋಟಿ ರೂ.ಗಳಿಗೆ ಏರಿದ್ದು, ಇದು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.15ರಷ್ಟು ಹೆಚ್ಚಳವಾಗಿದೆ ಎಂದು ಗುಪ್ತ ತಿಳಿಸಿದರು.

ಭಾರತ ಪಶ್ಚಿಮ ಕರಾವಳಿಯ ಕೊಂಕಣ ವಲಯದಲ್ಲಿ ಜನರಿಗೆ ಇನ್ನಷ್ಟು ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ರೈಲ್ವೆ ಸಚಿವಾಲಯವು ಅಧಿಕೃತ ಈಕ್ವಿಟಿ ಶೇರ್ ಬಂಡವಾಳವನ್ನು 806.47 ಕೋಟಿ ರೂ.ಗಳಿಂದ 4000 ಕೋಟಿ ರೂ.ಗಳಿಗೆ ಏರಿಸಲು ಅನುಮೋದನೆ ನೀಡಿದೆ. ಇದನ್ನು ಕೊಂಕಣ ರೈಲ್ವೆ ಮಾರ್ಗದ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಈಗಿನ ಹಲವು ಯೋಜನೆಗಳನ್ನು ಮುಂದುವರಿಸಲು ಬಳಸಲಾಗುವುದು ಎಂದು ಅವರು ವಿವರಿಸಿದರು.

ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇನ್ನಷ್ಟು ಸುರಕ್ಷಿತ ಹಾಗೂ ಹರ್ಷದಾಯಕ ಪ್ರಯಾಣದೊಂದಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕೊಂಕಣ ರೈಲ್ವೆ ಬದ್ಧವಾಗಿದ್ದು, ಪ್ರವಾಸೋದ್ಯಮ ಇಲಾಖೆಯು ಮಡಂಗಾವ್, ಕರ್ಮಾಲಿ ಹಾಗೂ ಥೀವಿಂ ನಿಲ್ದಾಣಗಳನ್ನು ಮೇಲ್ದರ್ಜೆ ಗೇರಿಸಲು 25 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ ಎಂದರು.

ಇದೀಗ ಕೊಂಕಣ ರೈಲ್ವೆ ಮೂರು ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮೊದಲನೇಯದಾಗಿ ರೋಹಾ ಹಾಗೂ ವೀರ್ ನಡುವಿನ 46 ಕಿ.ಮೀ. ಉದ್ದದ ರೈಲ್ವೆ ಹಳಿಯನ್ನು 2019ರ ಡಿಸೆಂಬರ್ ವೇಳೆಗೆ ದ್ವಿಪಥ ಗೊಳಿಸಲಾಗುವುದು. ಇದರೊಂದಿಗೆ 10 ಹೊಸ ರೈಲು ನಿಲ್ದಾಣಗಳ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಈ ನಿಲ್ದಾಣಗಳಲ್ಲಿ ಉಡುಪಿ ಜಿಲ್ಲೆಯ ಇನ್ನಂಜೆ ರೈಲು ನಿಲ್ದಾಣದ ಕಾಮಗಾರಿಯೂ ಸೇರಿದೆ.

ವಿದ್ಯುದ್ದೀಕರಣ: ಇಡೀ ಕೊಂಕಣ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ 1100 ಕೋಟಿ ರೂ.ವೆಚ್ಚದಲ್ಲಿ 2020ರಲ್ಲಿ ಪೂರ್ಣಗೊಳ್ಳಲಿದೆ. ಅಲ್ಲದೇ ಸರಕು ಸಾಗಾಟ ಚಟುವಟಿಕೆಗಳನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ. ಮಂಗಳೂರಿನಲ್ಲಿ ಎಂಆರ್‌ಪಿಎಲ್‌ಗಾಗಿ ರೈಲ್ವೆ ಸೈಡಿಂಗ್ ಹಾಗೂ ಗೋವಾದಲ್ಲಿ ಕಾನ್‌ಕೋರ್‌ಗಾಗಿ ಮಲ್ಟಿ ಮೋಡೆಲ್ ಲಾಜಿಸ್ಟಿಕ್ ಪಾರ್ಕ್‌ನ್ನು ಕೊಂಕಣ ರೈಲ್ವೆ ನಿರ್ಮಿಸಲಿದೆ ಎಂದು ಸಂಜಯ್ ಗುಪ್ತ ತಿಳಿಸಿದರು.

ಕಳೆದ ಜುಲೈ ತಿಂಗಳಲ್ಲಿ ಕೊಂಕಣ ರೈಲ್ವೆ ಮೊದಲ ಬಾರಿ ವಿದೇಶಿ ಪ್ರಾಜೆಕ್ಚ್ ಒಂದನ್ನು ಪಡೆದಿದ್ದು, ನೇಪಾಳದಲ್ಲಿ ರಾಕ್ಸೆಲ್ ಹಾಗೂ ಕಾಠ್ಮಂಡು ನಡುವೆ ರೈಲ್ವೆ ಲೈನ್‌ಗಾಗಿ ಸರ್ವೆ ಮಾಡುವ ಕಾಮಗಾರಿಯನ್ನು ಪಡೆದಿದೆ. ಈ ನಿಟ್ಟಿ ಎರಡೂ ದೇಶಗಳ ನಡುವೆ ಒಪ್ಪಂದ ಸಹಿಯನ್ನು ಹಾಕಲಾಗಿದೆ ಎಂದರು. ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಕೊಂಕಣ ರೈಲ್ವೆ ಸೆ.15ರಿಂದ ಅ.2ರವರೆಗೆ ‘ಸ್ವಚ್ಛತಾ ಹಿ ಸೇವಾ’ ಅಭಿಯಾನವನ್ನು ನಡೆಸಿದೆ ಎಂದರು.

ಕೊಂಕಣ ರೈಲ್ವೆ ನಿಗಮದ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News