ಕುವೈತ್‌ನಲ್ಲಿ ಸಂಕಷ್ಟಕ್ಕೀಡಾಗಿದ್ದ ಕನ್ನಡಿಗನಿಗೆ ಐಎಸ್‌ಎಫ್ ನೆರವು

Update: 2018-10-16 17:32 GMT

ಮಂಗಳೂರು, ಅ.16: ವೀಸಾ ನವೀಕರಿಸಲಾಗದೆ, ಕುವೈತ್‌ನಲ್ಲಿ ಕಳೆದ ಒಂದು ವರ್ಷದಿಂದ ತನ್ನ ಪ್ರಾಯೋಜಕನಿಂದ ನಿರಂತರ ಶೋಷಣೆಗೊಳಗಾಗಿದ್ದ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಹಮೀದ್ ಇಸ್ಲಾಂ ಎಂಬವರು ಇಂಡಿಯನ್ ಸೋಶಿಯಲ್ ಫೋರಮ್ ಕುವೈಟ್ (ಐಎಸ್‌ಎಫ್) ನೆರವಿನಿಂದ ಯಶಸ್ವಿಯಾಗಿ ತನ್ನ ಕುಟುಂಬವನ್ನು ಮರುಸೇರಿದ್ದಾರೆ.

2013ರಲ್ಲಿ ಉದ್ಯೋಗವನ್ನರಸಿ ಕುವೈತ್‌ಗೆ ಪ್ರಯಾಣಿಸಿದ್ದ ಹಮೀದ್, ಆರಂಭದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಅಡುಗೆ ಕೆಲಸಕ್ಕಾಗಿ ಸೇರಿಕೊಂಡಿದ್ದರು. ಮೊದಲ 4ವರ್ಷಗಳಲ್ಲಿ ಎಲ್ಲವೂ ಉತ್ತಮವಾಗಿಯೇ ಇದ್ದವು. ಆದಾಗ್ಯೂ ಅವರ ಪ್ರಾಯೋಜಕರು ತನ್ನ ರೆಸ್ಟೋರೆಂಟ್ ಮುಚ್ಚಿದಾಗ ಕೆಲಸ ಕಳೆದುಕೊಂಡ ಹಮೀದ್ ಉದ್ಯೋಗವನ್ನರಸಿಕೊಂಡು ಹೊಸ ಪ್ರಾಯೋಜಕನನ್ನು ಸೇರಿಕೊಳ್ಳುವಲ್ಲಿ ನಿರ್ಬಂಧಿತರಾದರು.

ಹೊಸ ಪ್ರಾಯೋಜಕ ವಿಸಾ ನವೀಕರಿಸಲು ನಿರಾಕರಿಸಿದ್ದು ಮಾತ್ರವಲ್ಲದೆ ವೇತನವನ್ನೂ ನೀಡದೆ ಸತಾಯಿಸುತ್ತಿದ್ದ. ಪರಿಣಾಮವಾಗಿ ಅವರು ಕುವೈತ್‌ನಲ್ಲಿ ಆಹಾರ, ವಸತಿ ಹಾಗೂ ಯಾವುದೇ ಸೂಕ್ತವಾದ ಸೌಕರ್ಯಗಳಿಲ್ಲದೆ, ಸುಮಾರು ಒಂದು ವರ್ಷಗಳ ಕಾಲ ಸಂಕಷ್ಟಕ್ಕೀಡಾಗಿದ್ದರು.

ಇದೇ ಅವಧಿಯಲ್ಲಿ ಅವರ ಮಗಳ ವಿವಾಹವೂ ನಡೆದಿತ್ತಲ್ಲದೆ, ದುರದೃಷ್ಟವಶಾತ್ ಹಮೀದ್ ಅವರ ತಾಯಿಯೂ ಮೃತಪಟ್ಟಿದ್ದರು. ಕುವೈತ್ ಸರಕಾರವು ಪ್ರಯಾಣ ನಿಷೇಧ ಹೇರಿದ್ದರಿಂದ ತಾಯ್ನಿಡಿಗೆ ಮರಳಲಾಗದೆ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲೂ ಪಾಲ್ಗೊಳ್ಳುವುದರಿಂದ ಹಮೀದ್ ವಂಚಿತರಾಗಿದ್ದರು.
ಹಮೀದ್ ಕುಟುಂಬಸ್ಥರು ಸ್ಥಳೀಯ ಎಸ್‌ಡಿಪಿಐ ಮುಖಂಡರೊಂದಿಗೆ ಅಳಲು ತೋಡಿಕೊಂಡು ಸಹಾಯಕ್ಕಾಗಿ ಮನವಿ ಮಾಡಿಕೊಂಡಿದ್ದರು. ಕುಟುಂಬಸ್ಥರ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಎಸ್‌ಡಿಪಿಐ ನಾಯಕರು, ಕುವೈತ್‌ನಲ್ಲಿ ಸಾಮಾಜಿಕ ಸೇವಾ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ಇಂಡಿಯನ್ ಸೋಷಿಯಲ್ ಫೋರಮ್ (ಐಎಸ್‌ಎಫ್)ನಾಯಕರನ್ನು ಸಂಪರ್ಕಿಸಿ ಸಹಾಯಕ್ಕಾಗಿ ಕೋರಿದ್ದರು.

ತಕ್ಷಣ ಕಾರ್ಯ ಪ್ರವೃತ್ತರಾದ ಐಎಸ್‌ಎಫ್ ಕುವೈಟ್ ತಂಡ, ಹಮೀದ್ ಅವರನ್ನು ಭೇಟಿಯಾಗಿ, ಮಾಹಿತಿ ಕಲೆ ಹಾಕಿ, ಪ್ರಾಯೋಜಕರನ್ನು ಸಂಪರ್ಕಿಸಿತು. ನಿರಂತರ ಒಂದು ತಿಂಗಳ ಪ್ರಯತ್ನದೊಂದಿಗೆ ಕೊನೆಗೂ ಹಮೀದ್ ವಾಪಸಾತಿಗೆ ಅಗತ್ಯವಾದ ಎಲ್ಲ ಏರ್ಪಾಡುಗಳನ್ನು ಮಾಡಿತು. ಹಮೀದ್ ಮೇಲಿದ್ದ ಎಲ್ಲ ಪ್ರಾಯೊಜಕ ಸಂಬಂಧಿ ಕೇಸುಗಳನ್ನೂ ತೆರವುಗೊಳಿಸುವಲ್ಲಿ ಯಶಸ್ವಿಯಾಯಿತು.

ಅ.14ರಂದು ಬೆಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ಹಮೀದ್‌ ಇಸ್ಲಾಂ ಬೆಳ್ತಂಗಡಿ ತಲುಪಿದರು. ಎಸ್‌ಡಿಪಿಐ ಮುಖಂಡರಾದ ಮುಸ್ತಫಾ ಪೆರ್ನೆ ನೇತೃತ್ವದ ತಂಡ ಹಮೀದ್ ಅವರ ಮನೆಗೆ ಭೇಟಿ ನೀಡಿ ಕ್ಷೇಮ ವಿಚಾರಿಸಿತು. ಎಸ್‌ಡಿಪಿಐ ಹಾಗೂ ಐಎಸ್‌ಎಫ್ ಕುವೈತ್ ಶ್ರಮವನ್ನು ಹಮೀದ್ ಮತ್ತು ಕುಟುಂಬಿಕರು ಮುಕ್ತ ಕಂಠದಿಂದ ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News